ಹೆಬ್ಬಾಲೆ, ನ. ೨೫ : ಹೆಬ್ಬಾಲೆ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ಹಬ್ಬದ ಅಂಗವಾಗಿ ತಮ್ಮ ಮನೆಗೆ ಲೈಟಿಂಗ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶದಿಂದ ಶಿಕ್ಷಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಹೆಬ್ಬಾಲೆ ಗ್ರಾಮದ ಹೊಸ ಬೀದಿ ನಿವಾಸಿ ಮೊಗಣ್ಣ ಎಂಬವರ ಮಗ ಶಿಕ್ಷಕ ಎಚ್.ಎಂ. ಗಿರೀಶ್ (೪೩) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಗಿರೀಶ್ ಚಿಕ್ಲಿಹೊಳೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ. ಈ ಹಿಂದೆ ಹೆಬ್ಬಾಲೆ ಕ್ಲಸ್ಟರ್ ಕೇಂದ್ರದ ಸಿಆರ್ಪಿಯಾಗಿ ಸೇವೆ ಸಲ್ಲಿಸಿದ್ದರು. ಮೃತರ ಪತ್ನಿ ಕೂಡ ಶಿಕ್ಷಕಿಯಾಗಿದ್ದು, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ವರ್ಷಕೊಮ್ಮೆ ಅದ್ಧೂರಿಯಾಗಿ ಆಚರಿಸುವ ಗ್ರಾಮ ದೇವತೆ ಹಬ್ಬದ ದಿನವೇ ಶಿಕ್ಷಕ ದುರ್ಮರಣ ಹೊಂದಿರುವುದು ಅವರ ಕುಟುಂಬ ಹಾಗೂ ಬಂಧುಬಾAಧವರನ್ನು ದುಃಖದ ಮಡುವಿಗೆ ತಳ್ಳಿದೆ. ಇದೇ ಪ್ರಥಮ ಬಾರಿಗೆ ಹಬ್ಬದ ದಿನದಂದು ಇಂತಹ ದುರ್ಘಟನೆ ನಡೆದಿದ್ದು, ಹಬ್ಬಕ್ಕೆ ಸೂತಕದ ಛಾಯೆ ಆವರಿಸಿದೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಶವಗಾರಕ್ಕೆ ಸಾಗಿಸಲಾಗಿದೆ.