ನಾಪೋಕ್ಲು, ನ. ೨೫: ಪುರಾತನ ಇತಿಹಾಸವಿರುವ ಬೆಟ್ಟಗೇರಿ ಭಗವತಿ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರಿಂದ ಶ್ರಮದಾನ ನಡೆಸಲಾಯಿತು.

ಬೆಟ್ಟಗೇರಿ ಭಗವತಿ ದೇವಸ್ಥಾನ ಪಟ್ಟಣದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಇದ್ದು ದುರ್ಗಮ ಹಾದಿಯಲ್ಲಿ ಬೆಟ್ಟದ ಮೇಲೆ ಇರುವ ದೇವಸ್ಥಾನವನ್ನು ತಲುಪುವುದು ಕಷ್ಟ ಸಾಧ್ಯವಾಗಿತ್ತು. ಆದರೆ ಸರ್ಕಾರದ ಅನುದಾನದಿಂದ ಅರ್ಧ ಕಿಲೋ ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣ ವಾಗಿದ್ದು ಇದೀಗ ದೇವಸ್ಥಾನದ ನೂತನ ಆಡಳಿತ ಮಂಡಳಿಯ ಮುತುವರ್ಜಿಯಿಂದ ತಾಲೂಕು ಪಂಚಾಯತ್ ಅನುದಾನ ರೂಪಾಯಿ ಐದು ಲಕ್ಷ ಕಾಂಕ್ರೀಟ್ ರಸ್ತೆಗಾಗಿ ಬಿಡುಗಡೆಯಾಗಿದೆ.

ದೇವಸ್ಥಾನದ ಪಾಳುಬಿದ್ದ ಬಾವಿಯನ್ನು ಶುಚಿಗೊಳಿಸಿ ಮೋಟಾರ್ ಅಳವಡಿಸಲಾಯಿತು . ಹಾಗೆಯೇ ಇಲಾಖೆಯಿಂದ ಆರು ವಿದ್ಯುತ್ ಕಂಬಗಳು ಹಾಗೂ ಸಾಮಗ್ರಿಗಳನ್ನು ಇಲಾಖೆ ಬರಿಸಿದ್ದು ಮಾತ್ರವಲ್ಲದೆ ಗ್ರಾಮಸ್ಥರಿಂದ, ದಾನಿಗಳಿಂದ ಹಣ ಸಂಗ್ರಹಿಸಿ ಆರು ವಿದ್ಯುತ್ ಕಂಬಗಳು ಹಾಗೂ ಸಾಮಗ್ರಿಗಳನ್ನು ಖರೀದಿ ಮಾಡಿ ಗುರುವಾರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ನೆರವಿನಿಂದ ವಿದ್ಯುತ್ ಕಂಬಗಳನ್ನು ಅಳವಡಿಸಿ ಎಕ್ಸ್ಕವೇಟರ್ ಯಂತ್ರದ ಮೂಲಕ ದೇವಸ್ಥಾನದ ಆವರಣವನ್ನು ವಿಸ್ತರಿಸಲಾಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪೌಡಂಡ ಡಾಲಿ ಭೀಮಯ್ಯ, ಉಪಾಧ್ಯಕ್ಷ ಕಟ್ರತಂಡ ವಿಜಯ ಚಿಣ್ಣಪ್ಪ, ಕಾರ್ಯದರ್ಶಿ ಚಳಿಯಂಡ ಕಟ್ಟಿ, ಖಜಾಂಚಿ ಚಳಿಯಂಡ ಪುಟ್ಟ ಯತೀಶ್, ಗೌರವ ಸಲಹೆಗಾರರಾದ ನೆಯ್ಯಣಿರ ಹೇಮಕುಮಾರ್, ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.