ಹೆಬ್ಬಾಲೆ, ನ. ೨೬: ತಾಲೂಕಿನ ಹೆಬ್ಬಾಲೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಅದ್ಧೂರಿಯಾಗಿ ನಡೆಯಿತು.
ಅಮ್ಮನವರ ಸನ್ನಿಧಿಯಲ್ಲಿ ಬೆಳಿಗ್ಗೆಯಿಂದ ಗಣಪತಿ ಪೂಜೆ, ಪುಣ್ಯಾಹಃ ರಕ್ಷಾಬಂಧನ ಧ್ವಜಾರೋಹಣ, ನವಗ್ರಹ ಸ್ಥಾಪನೆ, ನವಗ್ರಹ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ನೆರವೇರಿದವು.
ಹಬ್ಬದ ಅಂಗವಾಗಿ ಪವಿತ್ರ ಬನದಲ್ಲಿ ಬನಶಂಕರಿ ದೇವಸ್ಥಾನದಲ್ಲಿ ಕಳಶ ಸ್ಥಾಪಿಸುವುದರೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ದೇವಸ್ಥಾನ ಸಮಿತಿ ಅಧ್ಯಕ್ಷ ಯಜಮಾನ್ ಎಚ್.ಎನ್.ಬಸವರಾಜು ಹಾಗೂ ಕಾರ್ಯದರ್ಶಿ ಎಚ್.ಪಿ. ರಾಜು ಹಾಗೂ ಸಮಿತಿ ಸದಸ್ಯರ ನೇತೃತ್ವದಲ್ಲಿ ನಡೆದವು.
ಜಾತ್ರೆಯ ಅಂಗವಾಗಿ ದೇವಸ್ಥಾನ ಸಮಿತಿ ವತಿಯಿಂದ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿಯಿಂದ ರಾತ್ರಿ ವಿದ್ಯುತ್ ಅಲಂಕೃತ ಮಂಟಪದಲ್ಲಿ ಬನಶಂಕರಿ ಅಮ್ಮನ ಮೂರ್ತಿಯನ್ನು ಶೃಂಗರಿಸಿ ಉತ್ಸವ ಮಂಟಪದಲ್ಲಿ ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಯಿತು.
೯ ದಿವಸ ಉಪವಾಸ ವ್ರತ ಆಚರಿಸಿದ ಹರಕೆ ಹೊತ್ತ ಭಕ್ತಾದಿಗಳು ಉತ್ಸವಗಳೊಂದಿಗೆ ಮೆರವಣಿಗೆಯಲ್ಲಿ ತಾಯಿಯ ಬನಕ್ಕೆ ಬಂದು ದೇವಸ್ಥಾನದ ಮುಂದೆ ಹಾಕಿರುವ ಅಗ್ನಿಕುಂಡವನ್ನು ಹಾಯ್ದು ದೇವಿಯ ದರ್ಶನ ಪಡೆದು ಪುನೀತರಾದರು.
ದೇವಿಯ ಉತ್ಸವದೊಂದಿಗೆ ಗ್ರಾಮದ ಇತರ ಭಾಗಗಳಿಂದ ಹೊರಟ ಉತ್ಸವ ಮಂಟಪಗಳ ಶೋಭಾಯಾತ್ರೆಯು ಹಬ್ಬಕ್ಕೆ ಮೆರುಗು ನೀಡಿತು.
ಹಬ್ಬದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಹಾಗೂ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.
ಮೆರವಣಿಗೆ ಸಂದರ್ಭ ಗ್ರಾಮದ ಬಸ್ ನಿಲ್ದಾಣದ ಬಳಿ ಬಣ್ಣ ಬಣ್ಣದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸೆಳೆದವು.
ಈ ಹಬ್ಬಕ್ಕೆ ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗದ ಜನರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡು ದೇವಿ ದರ್ಶನ ಪಡೆದರು.
ಅನ್ನದಾನ
ದೇವಸ್ಥಾನ ಸಮಿತಿ ವತಿಯಿಂದ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಶುಕ್ರವಾರ ರಾತ್ರಿ ಶ್ರೀ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.