ವೀರಾಜಪೇಟೆ, ನ. ೨೪: ಪ್ರತಿ ಜ್ಞಾನವಿಕಾಸ ಕೇಂದ್ರದ ಮಹಿಳೆಯರು ಕನಸು ಕಂಡು ಸುಮ್ಮನಾಗದೆ ಸ್ವ ಉದ್ಯೋಗದಲ್ಲಿ ಆಸಕ್ತಿ ಹೊಂದಿ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬೇಕೆಂಬ ಸದಾಶಯದೊಂದಿಗೆ ಇಂತಹ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಅವರು ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವೀರಾಜಪೇಟೆ ಮಡಿಕೇರಿ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಮೂರ್ನಾಡು, ಪಂಚಶ್ರೀ ಜ್ಞಾನವಿಕಾಸ ಕೇಂದ್ರ ಮರಗೋಡು ಇವರುಗಳ ಸಂಯುಕ್ತಾಶ್ರಯದಲ್ಲಿ ಮರಗೋಡುವಿನಲ್ಲಿ ನಡೆದ ಹೊಲಿಗೆ ಯಂತ್ರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮೂರು ವರ್ಷಗಳ ಪದವಿ ವ್ಯಾಸಂಗ ಮಾಡಿ ಬೇರೆಯವರ ಲೆಕ್ಕಗಳನ್ನು ನಾವೂ ಬರೆಯುವ ಬದಲಾಗಿ ಮೂರು ತಿಂಗಳು ಸ್ವ ಉದ್ಯೋಗ ತರಬೇತಿ ಪಡೆದು ನಮ್ಮೆಲ್ಲ ಸದಸ್ಯರು ಇಂತಹ ಯೋಜನೆಗಳ ಗರಿಷ್ಠ ಲಾಭಗಳನ್ನು ಪಡೆದುಕೊಳ್ಳುವಂತೆ ಆಗಲಿ ಎಂದು ಪ್ರೇರಣಾ ನುಡಿಗಳನ್ನಾಡಿದರು.

ತರಬೇತಿ ಹೊಂದಿದವರಿಗೆ ಇದೇ ಸಂದರ್ಭ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ತಾಲೂಕಿನ ಯೋಜನಾಧಿಕಾರಿ ಬಿ. ದಿನೇಶ್ ಸರ್ವರಿಗೂ ಶುಭ ಹಾರೈಸಿದರು. ಹೊಸಕೇರಿ ಗ್ರಾಮ ಪಂಚಾಯಿತಿ ಸದಸ್ಯ ಜನಾರ್ದನ, ಒಕ್ಕೂಟ ಅಧ್ಯಕ್ಷ ಮಮತಾ, ಹೊಲಿಗೆ ತರಬೇತು ಶಿಕ್ಷಕಿ ಹರಿಣಾಕ್ಷಿ, ವಲಯದ ಮೇಲ್ವಿಚಾರಕ ಪ್ರತಾಪ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೇಯಾ, ಮರಗೋಡು ಸೇವಾ ಪ್ರತಿನಿಧಿ ಲತಾ ಹಾಗೂ ಮರಗೋಡು ಒಕ್ಕೂಟ ಪದಾಧಿಕಾರಿಗಳು, ಸದಸ್ಯರು ಪಂಚಶ್ರೀ ಕೇಂದ್ರದ ಸರ್ವ ಸದಸ್ಯರು ಉಪಸ್ಥಿತರಿದ್ದರು.