ಕಣಿವೆ, ನ. ೨೪: ಕನ್ನಡ ನಾಡಿನಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆಯ ಮೇಲೆ ಹೆಚ್ಚಿನ ಅಭಿಮಾನ ಹೊಂದುವ ಮೂಲಕ ನಾಡು -ನುಡಿ, ಕಲೆ, ಆಚಾರ - ವಿಚಾರ ಹಾಗು ಈ ಮಣ್ಣಿನ ಸಂಸ್ಕೃತಿಯನ್ನು ಗೌರವಿಸ ಬೇಕೆಂದು ಮಹಿಳಾ ಸಾಹಿತಿಯೂ ಆದಂತಹ ಕುಶಾಲನಗರದ ಅನುಗ್ರಹ ಪದವಿ ಕಾಲೇಜಿನ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಕರೆಕೊಟ್ಟರು.

ಹೆಬ್ಬಾಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಡಗಿನ ಗಡಿಗ್ರಾಮ ಕುಶಾಲನಗರ ತಾಲೂಕಿನ ಶಿರಂಗಾಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಕನ್ನಡ ಭಾಷೆಯಲ್ಲಿ ಅಗಾಧವಾದ ಸಾಧನೆಗಳಾಗಿದ್ದರೂ ಕೂಡ ನಮ್ಮ ಜನರಲ್ಲಿ ಕನ್ನಡ ಭಾಷಾಭಿಮಾನ ಕಡಿಮೆಯಾಗುತ್ತಿದೆ. ಮಕ್ಕಳು ಇಂಗ್ಲೀಷ್‌ನಲ್ಲಿ ಮಾತನಾಡಬೇಕು ಎಂಬ ಪೋಷಕರ ಇಂಗಿತ ಹೆಚ್ಚಾಗುತ್ತಿರುವ ಬಗ್ಗೆ ಲೀಲಾಕುಮಾರಿ ವಿಷಾದಿಸಿದರು.

ಅನ್ಯ ಭಾಷೆಗಳು ಕನ್ನಡದ ಮೇಲೆ ಏನೆಲ್ಲಾ ಪ್ರಭಾವ ಬೀರಿದರೂ ಕೂಡ ನಾವು ನಮ್ಮತನವನ್ನಾಗಲಿ, ಭಾಷೆಯ ಮೇಲಿನ ಮಮತೆಯನ್ನಾಗಲಿ ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಮಾತನಾಡಿ, ಕನ್ನಡ ಭಾಷೆ ಈ ನೆಲದಲ್ಲಿ ನೆಲೆಸಿರುವ ಪ್ರತಿಯೊಬ್ಬರ ಉಸಿರಾಗಬೇಕು ಎಂದರು. ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗಷ್ಟೇ ಸೀಮಿತ ವಾಗದೆ ನಿತ್ಯೋತ್ಸವವಾಗಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಾತನಾಡಿ, ಕನ್ನಡ ಶಾಲೆಗಳಲ್ಲಿ ಓದಿದಂತಹ ಅನೇಕ ಮಹನೀಯರು ಈ ನಾಡಿನ ಮಹಾನ್ ಸಾಧಕರಾಗಿ ಮರೆಯಾಗಿದ್ದಾರೆ.

ಅಂತಹ ಮಹನೀಯರ ಸ್ಮರಣೆಯೊಂದಿಗೆ ಇಂದಿನ ಶಾಲಾ ಕಾಲೇಜು ಮಕ್ಕಳು ಕನ್ನಡ ನಾಡು - ನುಡಿಯ ಬಗ್ಗೆ ಮಮಕಾರ ಹೊಂದಬೇಕೆAದು ಕರೆ ಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್. ಮೂರ್ತಿ ಮಾತನಾಡಿ, ರಾಜ್ಯೋತ್ಸವ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೇ ನಾಡಿನ ಉತ್ಸವವಾಗಬೇಕಿದೆ. ಆ ನಿಟ್ಟಿನಲ್ಲಿ ಪರಿಷತ್ತು ಎಲ್ಲಾ ಗ್ರಾಮಗಳಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಶಿರAಗಾಲ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸಿ.ಡಿ. ಲೋಕೇಶ್ ಮಾತನಾಡಿ, ಕೇಂದ್ರ ಸರ್ಕಾರ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸುವಂತಾಗಬೇಕು.

ಅAಚೆ ಕಚೇರಿ, ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ನ್ಯಾಯಾಲಯ ಗಳಲ್ಲಿ ಕನ್ನಡದಲ್ಲಿಯೇ ವ್ಯವಹಾರಗಳು ನಡೆಯದಿರುವ ಬಗ್ಗೆ ವಿಷಾದಿಸಿದರು.

ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಕೋಶಾಧಿಕಾರಿ ಕೆ.ವಿ. ಉಮೇಶ್, ಹೋಬಳಿ ಕಾರ್ಯದರ್ಶಿ ಹೆಚ್.ಎನ್. ಸುಬ್ರಮಣ್ಯ, ಕವಿತಾ ಪುಟ್ಟೇಗೌಡ, ಕೋಶಾಧಿಕಾರಿ ಎಸ್.ಎಸ್. ಚಂದ್ರಶೇಖರ್, ಕೊಡ್ಲಿಪೇಟೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್. ಗಣೇಶ್ ಇದ್ದರು. ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ನಡೆಯಿತು.