ಮಡಿಕೇರಿ, ನ. ೨೫: ಎಂ. ಬಾಡಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗ್ರಾಮಾಂತರ ಹಿಂದೂ ಹಾಕಿ ಪಂದ್ಯಾವಳಿಯ ೪ನೇ ದಿನದ ಪಂದ್ಯದಲ್ಲಿ ಬಾಡಗ (ಎ), ಚೆಂಬೆಬೆಳ್ಳೂರು, ನಾಪೋಕ್ಲು, ಕಿರುಂದಾಡು ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

ತಾ. ೨೬ ರಂದು (ಇಂದು) ಸೆಮಿಫೈನಲ್ ಸೆಣಸಾಟ ನಡೆಯಲಿದ್ದು, ಆಟ ರೋಚಕತೆಯಲ್ಲಿ ಕೂಡಿರಲಿದೆ ಎಂಬ ನಿರೀಕ್ಷೆ ಇದೆ. ಬೆಳಿಗ್ಗೆ ೧೧ ಗಂಟೆಗೆ ಬಾಡಗ (ಎ)-ಚೆಂಬೆಬೆಳ್ಳೂರು ನಡುವೆ, ಮಧ್ಯಾಹ್ನ ೧.೩೦ಕ್ಕೆ ನಾಪೋಕ್ಲು-ಕಿರುಂದಾಡು ನಡುವೆ ಪಂದ್ಯಾಟ ನಡೆಯಲಿದೆ.

ಇಂದಿನ ಮೊದಲ ಪಂದ್ಯದಲ್ಲಿ ೫-೩ ಗೋಲುಗಳ ಅಂತರದಲ್ಲಿ ಬಾಡಗ ನೆಲಜಿ ವಿರುದ್ಧ ಗೆಲುವು ಸಾಧಿಸಿ ಉಪಾಂತ್ಯಕ್ಕೆ ಅರ್ಹತೆ ಗಳಿಸಿಕೊಂಡಿತು. ಬಾಡಗ ಪರ ರಮೇಶ್ ೨, ನೆಲಜಿ ಪರ ದಿಲೀಪ್, ಅಕ್ಷಯ್ ತಲಾ ಒಂದೊAದು ಗೋಲು ಗಳಿಸಿದ ಕಾರಣ ಪಂದ್ಯಾಟ ಡ್ರಾಗೊಂಡಿತು. ಆ ಬಳಿಕ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಇದರಲ್ಲಿ ಬಾಡಗ ೩ ಗೋಲು ಗಳಿಸಿ ಸೆಮಿಫೈನಲ್ ತಲುಪಿತು.

ನಾಲಡಿ ವಿರುದ್ಧ ಚೆಂಬೆಬೆಳ್ಳೂರು ೬-೧ ಗೋಲುಗಳ ಭರ್ಜರಿ ಜಯ ಸಾಧಿಸಿತು. ಚೆಂಬೆಬೆಳ್ಳೂರು ಪರ ಮೋಕ್ಷಿತ್, ಸೋನು ಪೊನ್ನಣ್ಣ, ಕುಶಾಲಪ್ಪ ತಲಾ ೨ ಗೋಲು ಬಾರಿಸಿ ತಂಡಕ್ಕೆ ನೆರವಾದರು. ನಾಲಡಿ ಪರ ಚೇತನ್ ಏಕೈಕ ಗೋಲು ಗಳಿಸಿದರು.

ನಾಪೋಕ್ಲು ಹಾಗೂ ಕುಂದ ನಡುವಿನ ಪಂದ್ಯದಲ್ಲಿ ಶುಭಂ ಚಿಟ್ಟಿಯ್ಯಪ್ಪ ಬಾರಿಸಿದ ಏಕೈಕ ಗೋಲಿನಿಂದ ನಾಪೋಕ್ಲು ಸೆಮಿಸ್‌ಗೆ ಪ್ರವೇಶಿಸಿತು.

ಕಾಂತೂರು ಹಾಗೂ ಕಿರುಂದಾಡು ನಡುವಿನ ಪಂದ್ಯದಲ್ಲಿ ೩-೧ ಗೋಲುಗಳಲ್ಲಿ ಕಿರುಂದಾಡು ಜಯಸಾಧಿಸಿತು. ಕಿರುಂದಾಡು ಪರ ಕಾಳಪ್ಪ, ಪೊನ್ನಪ್ಪ, ವಿನು ಭೀಮಯ್ಯ ತಲಾ ಒಂದು ಗೋಲು, ಕಾಂತೂರು ಪರ ವಿನು ಏಕೈಕಗೋಲು ಗಳಿಸಿದರು.