ಸೋಮವಾರಪೇಟೆ, ನ. ೨೫: ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ, ಪ್ರಸ್ತುತ ಹಾಸನ ಶಾಂತಿನಗರದ ೧೧ನೇ ಬೆಟಾಲಿಯನ್ ಕೆಎಸ್‌ಆರ್‌ಪಿಯಲ್ಲಿ ಕರ್ತವ್ಯದಲ್ಲಿದ್ದ ಎ.ಎಸ್.ಐ.ಯೋರ್ವರು ಹೃದಯಾ ಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹಾನಗಲ್ಲು ಗ್ರಾಮದ ಸಿದ್ದಾರ್ಥ ಬಡಾವಣೆ ನಿವಾಸಿ ಎಚ್.ಎಂ. ಆನಂದ್ (೫೮) ಮೃತಪಟ್ಟವರು. ಕೆಎಸ್‌ಆರ್‌ಪಿ ೧೧ನೇ ಬೆಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದ್ ಅವರಿಗೆ ನಿನ್ನೆ ರಾತ್ರಿ ೧೦.೩೦ರ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

೧೯೯೨ರಲ್ಲಿ ಕೆ.ಎಸ್.ಆರ್.ಪಿ.ಗೆ ಸೇರ್ಪಡೆಗೊಂಡು, ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯ ಎಸ್‌ಟಿಎಫ್‌ನಲ್ಲಿ ೫ ವರ್ಷ ಸೇವೆ ಸಲ್ಲಿಸಿದ್ದರು. ನಂತರ ಮೈಸೂರು, ಮಂಗಳೂರಿನಲ್ಲಿ ಸೇವೆ ಸಲ್ಲಿಸಿ ಇದೀಗ ಹಾಸನದಲ್ಲಿ ಕರ್ತವ್ಯದಲ್ಲಿದ್ದರು.

ಇಂದು ಸಂಜೆ ಹಾನಗಲ್‌ನ ರುದ್ರಭೂಮಿಯಲ್ಲಿ ಕೆಎಸ್‌ಆರ್‌ಪಿ ತುಕಡಿ ವತಿಯಿಂದ ಗೌರವ ವಂದನೆ ಸಲ್ಲಿಸಿ, ಕುಶಾಲತೋಪು ಹಾರಿಸಲಾಯಿತು. ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್, ಕೆಎಸ್‌ಆರ್‌ಪಿಯ ಆರ್‌ಪಿಐ ವಸಂತ್ ಕುಮಾರ್, ಎಆರ್‌ಎಸೈ ಲಕ್ಷö್ಮಣ, ಈಶ್ವರಪ್ಪ ಅಂತಿಮ ನಮನ ಸಲ್ಲಿಸಿದರು. ನಂತರ ಅಂತಿಮ ಸಂಸ್ಕಾರ ನಡೆಯಿತು.

ಮುಂದಿನ ೨ ವರ್ಷಗಳ ಸೇವಾವಧಿಯ ನಂತರ ನಿವೃತ್ತರಾಗಲಿದ್ದ ಆನಂದ್ ಅವರು, ಸೇವೆಯಲ್ಲಿದ್ದ ಸಂದರ್ಭವೇ ನಿಧನರಾಗಿದ್ದು, ತಾಯಿ ಲೀಲಾವತಿ, ಪತ್ನಿ ಸುಮಿತ್ರ ಸೇರಿದಂತೆ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.