ಮಡಿಕೇರಿ, ನ. ೨೫: ರಾಜ್ಯ ಉಚ್ಚನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ ಮಡಿಕೇರಿ ಕೋಟೆ ಕಟ್ಟಡ ದುರಸ್ತಿ ಕಾರ್ಯ ಕಳೆದ ಸೆಪ್ಟೆಂಬರ್‌ನಿAದಲೇ ಸ್ಥಗಿತ ಗೊಂಡಿರುವುದು ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ಸಂದರ್ಭ ಬಯಲಾಗಿದೆ. ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಕೋಟೆ ದುರಸ್ತಿಗೆ ಹಾಗೂ ಹಳೆಯ ಅರಮನೆ ಕಟ್ಟಡವನ್ನು ಸ್ಮಾರಕವಾಗಿ ಉಳಿಸಲು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಜೆ.ಎಸ್. ವಿರೂಪಾಕ್ಷಯ್ಯ ಅವರು ಈ ಸಂದರ್ಭ ಹಾಜರಿದ್ದರು.

ಗುತ್ತಿಗೆದಾರರಾದ ಬಾಗಲಕೋಟೆಯ ಗುರಯ್ಯ ಹಿರೇಮಠ್ ಅವರು ಗೈರುಹಾಜರಾಗಿದ್ದು, ಅವರ ಪರವಾಗಿ ಮಾತನಾಡಿದ ಪ್ರತಿನಿಧಿಯೊಬ್ಬರು ಹಾಗೂ ಈ ಕಾಮಗಾರಿಯ ಉಸ್ತುವಾರಿ ಹೊತ್ತಿರುವ ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯ (ಎಎಸ್‌ಐ) ಸಿಬ್ಬಂದಿಯೊಬ್ಬರು ಈ ಕುರಿತಾಗಿ ಸಮರ್ಪಕವಾಗಿ ಉತ್ತರಿಸಲು ಅಸಮರ್ಥರಾಗಿದ್ದರು. ವಿರೂಪಾಕ್ಷಯ್ಯ ಅವರ ಪ್ರಕಾರ ಗುತ್ತಿಗೆದಾರರಾದ ಹಿರೇಮಠ್ ಅವರು, ತೇಗದ ಮರ ಮತ್ತಿತರ ಕೆಲವು ಅಗತ್ಯ ಕಚ್ಚಾ ಸಾಮಗ್ರಿಗಳ ಅಲಭ್ಯತೆಯಿಂದಾಗಿ ಈ ಕಾಮಗಾರಿಯನ್ನು

(ಮೊದಲ ಪುಟದಿಂದ) ಸ್ಥಗಿತಗೊಳಿಸಿರುವುದಾಗಿ ತಿಳಿದು ಬಂದಿತು. ಅಲ್ಲದೆ, ಎಎಸ್‌ಐ ಹಳೇಬೀಡುವಿನಲ್ಲಿ ಯುನೆಸ್ಕೋ ಸಂಸ್ಥೆಯ ಸ್ಮಾರಕ ಪುನರ್ ನಿರ್ಮಾಣಕ್ಕಾಗಿ ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ೪೩ ಅಧಿಕ ಸಿಬ್ಬಂದಿಗಳನ್ನು ಗುತ್ತಿಗೆದಾರರ ಮೂಲಕ ಅಲ್ಲಿಗೆ ಕರೆಸಿಕೊಂಡಿದೆ. ಇದರಿಂದಾಗಿ ನ್ಯಾಯಾಲಯ ಆದೇಶ ಇದ್ದರೂ ಕೂಡ ಮಡಿಕೇರಿಯಲ್ಲಿ ಹಳೆ ಕೋಟೆಯ ದುರಸ್ತಿ ಕಾರ್ಯ ತೀವ್ರ ವಿಳಂಬವಾಗುತ್ತಿದೆ. ಕೇವಲ ಶೇ. ೨೫ ರಷ್ಟು ಮಾತ್ರ ಕಾಮಗಾರಿ ನಡೆದಿರುವುದು ಕಂಡು ಬಂದಿದೆ. ಈ ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಂಡು, ಈ ಸಮಸ್ಯೆಗಳನ್ನು ನಿವಾರಿಸಿ ಗುತ್ತಿಗೆದಾರರು ತಕ್ಷಣದಿಂದಲೇ ಕಾರ್ಯನಿರ್ವಹಿಸಲು ಸೂಚಿಸಬೇಕೆಂದು ವಿರೂಪಾಕ್ಷಯ್ಯ ಮನವಿ ಮಾಡಿದರು. ಅಲ್ಲದೆ, ಗುತ್ತಿಗೆದಾರರಿಗೆ ಅಗತ್ಯವಾದ ತೇಗದ ಮರ ಇತ್ಯಾದಿ ಕಚ್ಚಾ ಸಾಮಗ್ರಿಗಳನ್ನು ಸರಕಾರಿ ದರದಲ್ಲಿ ಶೀಘ್ರ ಒದಗಿಸಿ ಸಹಕರಿಸುವಂತೆಯೂ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.

ಜಿಲ್ಲಾಧಿಕಾರಿ ಸತೀಶ ಬಿ.ಸಿ. ಅವರು ಹಳೆಯ ಕೋಟೆ ಕಟ್ಟಡ ದುರಸ್ತಿ ಕಾರ್ಯವನ್ನು ಸಂಪೂರ್ಣವಾಗಿ ವೀಕ್ಷಿಸಿದರು. ಈ ಹಿಂದೆ ಕೋಟೆ ಆವರಣದೊಳಗೆ ಅನೇಕ ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಆ ಕಚೇರಿಗಳಿಗೆ ಸಂಬAಧಿಸಿದ ನೂರಾರು ಹಳೆಯ ಕಡತಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಅವರ ಗಮನಕ್ಕೆ ಬಂದಿತು. ಕೂಡಲೇ ಅವರು ತಹಶೀಲ್ದಾರ್ ಮಹೇಶ್ ಮತ್ತು ಸ್ಥಳದಲ್ಲಿದ್ದ ಅನೇಕ ಅಧಿಕಾರಿಗಳಿಗೆ ಸೂಚನೆ ನೀಡಿ ಎಲ್ಲಾ ಹಳೆಯ ಕಡತಗಳನ್ನು ಪರಿಶೀಲಿಸಿ ಅದರಲ್ಲಿ ಏನಾದರೂ ಮಹತ್ವದ ದಾಖಲೆಗಳಿದ್ದರೆ, ಇರಿಸಿಕೊಂಡು ಉಳಿದವುಗಳನ್ನು ತೆರವುಗೊಳಿಸುವಂತೆ ನಿರ್ದೇಶಿಸಿದರು.

ಕೋಟೆ ಕಟ್ಟಡದಲ್ಲಿ ಸೂಚಿತ ನಕ್ಷೆಯ ಅನ್ವಯ ಕೆಲಸ ಕಾರ್ಯ ನಡೆದಿರುವುದು ಗೋಚರವಾಗಿದ್ದರೂ, ವಿಳಂಬವಾಗುತ್ತಿರುವುದಕ್ಕೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಕೂಡ ತಾನು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಗುತ್ತಿಗೆದಾರರ ಕಡೆಯವರಿಗೆ ಮುನ್ನೆಚ್ಚರಿಕೆಯಿತ್ತರು. ಅಲ್ಲದೆ ಸದ್ಯದಲ್ಲಿಯೇ ಈ ಸಂಬAಧ ನ್ಯಾಯಾಲಯದಲ್ಲಿ ಅರ್ಜಿದಾರರಾದ ವಿರೂಪಾಕ್ಷಯ್ಯ ಹಾಗೂ ಅವರ ವಕೀಲರಾದ ರವೀಂದ್ರ ನಾಥ್ ಕಾಮತ್ ಅವರನ್ನು ಕರೆಸಿ ಅವರ ಸಮ್ಮುಖದಲ್ಲಿಯೇ ಪ್ರಾಚ್ಯವಸ್ತು ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಿ ಸುದೀರ್ಘವಾಗಿ ಈ ಕುರಿತು ಚರ್ಚಿಸುವುದಾಗಿ ಅವರು ತಿಳಿಸಿದರು. ಕಾಮಗಾರಿಯನ್ನು ಪರಿಶೀಲಿಸಲು ರಾಜ್ಯಮಟ್ಟದ ಅಧಿಕಾರಿಗಳು ಆಗಿಂದಾಗ್ಗೆ ಆಗಮಿಸಿ ಕಾಮಗಾರಿಯ ಗುಣಮಟ್ಟವನ್ನು ಗಮನಿಸಲು ಕೋರುವುದಾಗಿಯೂ ತಿಳಿಸಿದರು.