ಮಡಿಕೇರಿ, ನ. ೨೫: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ದೊಡ್ಡ ಕಣಗಾಲು ಗ್ರಾಮದಲ್ಲಿ ೧೧ನೇ ಶತಮಾನಕ್ಕೆ ಸೇರಿದ ಮೂರು ಜೈನಶಾಸನಗಳು ಪತ್ತೆಯಾಗಿವೆ.

ಈ ಶಾಸನಗಳು ದೊಡ್ಡ ಕಣಗಾಲಿನ ಬಿ.ಇ. ಸಂದೇಶ್ ಅವರ ತೋಟದ ಮಧ್ಯದಲ್ಲಿ ಪಾಳುಬಿದ್ದಿರುವ ಬಸದಿ ಹಾಗೂ ಅದರ ಪರಿಸರದಲ್ಲಿ ಪತ್ತೆಯಾಗಿವೆ. ನಿತಿನ್ ಅವರು ಕ್ಷೇತ್ರಕಾರ್ಯ ನಿಮಿತ್ತ ಇದೇ ಗ್ರಾಮದಲ್ಲಿ ದಾಖಲಾಗಿದ್ದ ಮತ್ತೊಂದು ಜೈನಶಾಸನವನ್ನು ಹುಡುಕುತ್ತಾ ಸಾಗಿದಾಗ ಈ ಶಾಸನಗಳು ಪತ್ತೆಯಾಗಿವೆ.

ಶಾಸನಗಳ ವಿವರ

* ಜೈನತೀರ್ಥಂಕರರ ಪಾದಪೀಠದಲ್ಲಿನ ಶಾಸನ.

* ಜೀರ್ಣವಾದ ವಿಗ್ರಹದ ಯಕ್ಷಿಯ ಪಾದಪೀಠದಲ್ಲಿ ಪತ್ತೆಯಾದ ಶಾಸನ.

* ಕಲ್ಲಿನ ಮೇಲಿರುವ ಶಾಸನ.

ಜೈನತೀರ್ಥಂಕರರ ಪಾದಪೀಠದಲ್ಲಿನ ಶಾಸನ -೩.೩ ಅಡಿ ಉದ್ದವಿರುವ ಕಾಯೋತ್ಸರ್ಗ ಭಂಗಿಯಲ್ಲಿರುವ ತೀರ್ಥಂಕರರ ವಿಗ್ರಹದ ಪಾದಪೀಠದಲ್ಲಿ ಪತ್ತೆಯಾದ ಶಾಸನ.

ಶಾಸನದ ಸಾರಾಂಶ-‘‘ಮೂಲಸAಘ ಕುಂದಕೊAಡಾನ್ವಯ ಪೊಸ್ತಕಗಚ್ಛದ ಶ್ರೀ ಮೇಘಚಂದ್ರತ್ರೆöÊವಿದ್ಯಾದೇವರ ಶಿಷ್ಯರಾದ ಶ್ರೀ ಪ್ರಭಾಚಂದ್ರ ಸಿದ್ಧಾಂತ ದೇವರ ಶಿಷ್ಯ ಶ್ರೀ ತ್ರಿಭುವನಮಲ್ಲ ಕೊಂಗಾಳ್ವದೇವರು ಪರೋಕ್ಷವಿನಯ ಹಾಗೂ ಲೋಕ ಕಲ್ಯಾಣಾರ್ಥವಾಗಿ ಈ ವಿಗ್ರಹವನ್ನು ಮಾಡಿಸಿದ ಎಂದು ಶಾಸನವು ತಿಳಿಸುತ್ತದೆ”.

ಕಾಲ -‘‘ಶ್ರೀ ತ್ರಿಭುವನಮಲ್ಲ ಕೊಂಗಾಳ್ವದೇವರ ಹೆಸರು ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಇತರ ಶಾಸನೋಕ್ತ ಆಧಾರಗಳ ಮೂಲಕ ತ್ರಿಭುವನಮಲ್ಲ ಕೊಂಗಾಳ್ವದೇವರ ಕಾಲವು ಕ್ರಿ.ಶ. ೧೦೬೬ರಿಂದ ೧೧೦೦ಎಂದು ತಿಳಿದು ಬರುತ್ತದೆ. ಈ ಹಿನ್ನೆಲೆಯಲ್ಲಿ ಈ ಶಾಸನವು ೧೧ನೇ ಶತಮಾನಕ್ಕೆ ಸೇರಿದ್ದಾಗಿದೆ.

ಜೀರ್ಣವಾದ ವಿಗ್ರಹದಯಕ್ಷಿಯ ಪಾದಪೀಠದಲ್ಲಿ ಪತ್ತೆಯಾದ ಶಾಸನ

* ಯಕ್ಷಿ ವಿಗ್ರಹದ ಪಾದಪೀಠದಲ್ಲಿ ನಾಲ್ಕು ಸಾಲುಗಳಿರುವ ಶಾಸನ.

* ಶಾಸನದ ಸಾರಾಂಶ - ಶಾಸನದ ಅಕ್ಷರಗಳು ಅಲ್ಲಲ್ಲಿ ತೃಟಿತವಾಗಿದ್ದು, ನಾಲ್ಕು ಸಾಲುಗಳಿರುವ ಶಾಸನವು ಮುರಿದು ಹೋದ ಶಾಸನದ ಭಾಗವಾದ್ದರಿಂದ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಆದರೆ ಶಾಸನದಲ್ಲಿ” ಮೂಲಸಂಘ” ಹಾಗೂ ‘‘ಪುಣ್ಯಾರ್ತ” ಎಂಬ ಪದಗಳನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಈ ಶಾಸನವನ್ನು ಕೆತ್ತಿಸಿರುವ ವ್ಯಕ್ತಿಯು ಮೂಲ ಸಂಘಕ್ಕೆ ಸೇರಿರಬೇಕು ಅಥವಾ ಮೂಲ ಸಂಘಕ್ಕೆ ಸೇರಿದ ಗುರುಗಳ ಶಿಷ್ಯರಾಗಿದ್ದು, ಸರ್ವಜನರ ಒಳಿತಿಗಾಗಿ ಈ ವಿಗ್ರಹವನ್ನು ಮಾಡಿಸಿ ಶಾಸನವನ್ನು ಕೆತ್ತಿಸಿರಬೇಕು, ಈ ಶಾಸನದಲ್ಲಿ ‘‘ಮೂಲಸಂಘ” ಎಂಬ ಪದವಿದ್ದು, ಇದು ಜೈನ ಶಾಸನವೆಂದು ನಿಶ್ಚಯಿಸಬಹುದು.

ಶಾಸನದ ಕಾಲ - ಶಾಸನದ ಲಿಪಿಯ ಆಧಾರದ ಮೇಲೆ ಶಾಸನವು ೧೧ನೇ ಶತಮಾನಕ್ಕೆ ಸೇರಿದ್ದೆಂದು ನಿರ್ಧರಿಸಬಹುದು.

(ಮೊದಲ ಪುಟದಿಂದ) ಕಲ್ಲಿನ ಮೇಲಿರುವ ಶಾಸನ - ಶಾಸನದ ಮೇಲ್ಭಾಗದಲ್ಲಿ ಸೂರ್ಯಚಂದ್ರರ ಕೆತ್ತನೆಯನ್ನು ಕಾಣಬಹುದಾದ ಈ ಶಾಸನದಲ್ಲಿ ಅಲ್ಲಲ್ಲಿ ಕೆಲವು ಅಕ್ಷರಗಳನ್ನು ಕಾಣಬಹುದು. ೧೪ ಸಾಲುಗಳಿರುವ ಈ ಶಾಸನವು ಸಾಕಷ್ಟು ತೃಟಿತವಾಗಿರುವುದರಿಂದ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಈ ಬಸದಿ, ವಿಗ್ರಹ ಹಾಗೂ ಶಾಸನಗಳು ಲಭ್ಯವಾಗಿರುವ ಈ ಜಾಗವು ಕೊಡವರಿಗೆ ಸೇರಿದ್ದು, ಪ್ರತಿ ವರ್ಷ ಏಪ್ರಿಲ್ ತಿಂಗಳಿನ ಮೊದಲ ಮಳೆಯ ನಂತರ ವಿಶೇಷ ಪೂಜೆಯನ್ನು ನೆರವೇರಿಸುತ್ತಾರೆ. ಈ ಪ್ರದೇಶದಲ್ಲಿ ಜೈನ ಸಮಾಜದ ಯಾವುದೇ ಮನೆಗಳಿಲ್ಲ. ಜೀರ್ಣಾವಸ್ಥೆಯಲ್ಲಿರುವ ಈ ಬಸದಿಯ ಜೀರ್ಣೋದ್ಧಾರ ಕೈಗೊಂಡು ತೀರ್ಥಂಕರರ ವಿಗ್ರಹದ ನಿತ್ಯ ಪೂಜೆಗೆ ವ್ಯವಸ್ಥೆ ಕಲ್ಪಿಸಿ, ಕಳೆದ ಕೆಲವು ಶತಮಾನಗಳಿಂದ ಈ ಜಿಲ್ಲೆಯಲ್ಲಿ ನಶಿಸಿ ಹೋಗಿರುವ ಜೈನಧರ್ಮದ ಪ್ರಾಚೀನತೆಯನ್ನು ಕಾಪಾಡಲು ಜೈನ ಸಮಾಜದವರು ಕೈ ಜೋಡಿಸಬೇಕಿದೆ.

ದೊಡ್ಡಕಣಗಾಲ್ ಶನಿವಾರಸಂತೆಯಿAದ ೧೨ ಕಿ.ಮೀ., ತಾಲೂಕು ಕೇಂದ್ರ ಸೋಮವಾರಪೇಟೆಯಿಂದ ೧೬ ಕಿ.ಮೀ.,ಜಿಲ್ಲಾ ಕೇಂದ್ರ ಮಡಿಕೇರಿಯಿಂದ ೬೨ ಕಿ.ಮೀ. ಹಾಗೂ ಹಾಸನದಿಂದ ೬೦ ಕಿ.ಮೀ. ದೂರದಲ್ಲಿದೆ.

-ನಿತಿನ್ ಹೆಚ್.ಪಿ., ಸಂಶೋಧಕ

ದೂ: ೯೮೮೦೮೧೮೮೬೯.