ಮಡಿಕೇರಿ, ನ. ೨೩: ಮೈಂಡ್ ಅಂಡ್ ಮ್ಯಾಟರ್ ಸಂಸ್ಥೆಯಿAದ ತಾ. ೨೫ ರಿಂದ ಡಿ. ೯ರ ವರೆಗೆ ‘ಪೇಂಟ್ ಎ ಬಾಲ್’ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನವನ್ನು ನಗರ ದಿ ವೀಲ್ ಕೆಫೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಟ್ರಸ್ಟಿಗಳಾದ ಅಚ್ಚಯ್ಯ ಹಾಗೂ ದೀಪಿಕಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೈಂಡ್ ಅಂಡ್ ಮ್ಯಾಟರ್ ಸಂಸ್ಥೆ ಆಗಸ್ಟ್ ೨೦೨೨ರಲ್ಲಿ ಮನೋವೈದ್ಯಕೀಯ ಸಾಮಾಜಿಕ ಕಾರ್ಯ ಇಲಾಖೆ, ನಿಮ್ಹಾನ್ಸ್, ಬೆಂಗಳೂರು ಸಹಯೋಗದೊಂದಿಗೆ ಕೊಡಗು ಜಿಲ್ಲೆಯಾದ್ಯಂತ ೧೬ ಶಾಲಾ ಮತ್ತು ಕಾಲೇಜುಗಳಿಗೆ ಮಾನಸಿಕ ಆರೋಗ್ಯ ಜಾಗೃತಿ ಸಮಾವೇಶಗಳನ್ನು ನಡೆಸಿದೆ. ಈ ಬಾರಿ ತಾ. ೨೫ ರಿಂದ ಅಭಿಯಾನ ಆರಂಭವಾಗಲಿದೆ.

ಈ ಅಭಿಯಾನವು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಾನಸಿಕ ಆರೋಗ್ಯದ ಬಗೆಗಿನ ಅಪನಂಬಿಕೆಗಳನ್ನು ತೊಡೆದು ಹಾಕಿ ಅರಿವು ಮೂಡಿಸಲು ಉದ್ದೇಶಿಸಿದೆ. ೨೦೨೧ರಲ್ಲಿ ಭಾರತದಲ್ಲಿ ಸರಿಸುಮಾರು ೧,೬೪,೦೦೦ ಜನರು ಆತ್ಮಹತ್ಯೆಗೆ ತುತ್ತಾಗಿದ್ದಾರೆ ಮತ್ತು ೨೦೨೦ರಲ್ಲಿ ಸುಮಾರು ೧೧,೦೦೦ ಮಕ್ಕಳು ಆತ್ಮಹತ್ಯೆಗೆ ಬಲಿಯಾಗಿದ್ದಾರೆ. ಅನೇಕ ಜನರು ಮಾನಸಿಕ ಆರೋಗ್ಯದ ಕಾಯಿಲೆಗಳಿಂದ ಮೌನವಾಗಿ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಂಡ್ ಅಂಡ್ ಮ್ಯಾಟರ್ ತಾರೆಯರಾದ ರಘು ವಿನಸ್ಟೋರ್ (ರಘುಗೌಡ), ಭೂಮಿಶೆಟ್ಟಿ, ನಂದು, ಸೌಮ್ಯ ಕಾಶಿ, ಉರ್ಮಿ, ಸಿದ್ಧಾರ್ಥ್ ವೆಂಕಟ್, ವಿನೀತ್ ಜೋಸೆ, ಮನು ಮತ್ತು ಇನ್ನೂ ಅನೇಕ ಸಂಗೀತಗಾರರು ಮತ್ತು ಕಲಾವಿದರೊಂದಿಗೆ ಕೆಲವು ಅನ್‌ಪ್ಲಗ್ ಸೆಷನ್‌ಗಳನ್ನು ಆಯೋಜಿಸಿದ್ದು, ೨೫, ೨೬ ಮತ್ತು ೨೭ ರಂದು ಸಂಜೆ ೭ ರಿಂದ ೯ರ ವರೆಗೆ ಮಡಿಕೇರಿಯ ದಿ ವ್ಹೀಲ್ ಕೆಫೆಯಲ್ಲಿ ನಡೆಯಲಿದೆ. ಪ್ರವೇಶ ಉಚಿತವಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು.