ಮಡಿಕೇರಿ, ನ. ೨೩: ಎಂ. ಬಾಡಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗ್ರಾಮಾಂತರ ಹಿಂದೂ ಹಾಕಿ ಪಂದ್ಯಾವಳಿಯಲ್ಲಿ ೭ ತಂಡಗಳು ಮುನ್ನಡೆ ಕಾಯ್ದುಕೊಂಡವು.
ದಿನದ ಮೊದಲ ಪಂದ್ಯ ಎಂ.ಬಾಡಗ (ಎ) ಹಾಗೂ ದೇವಣಗೇರಿ ನಡುವೆ ನಡೆದು ೩-೧ ಗೋಲುಗಳ ಅಂತರದಲ್ಲಿ ಎಂ.ಬಾಡಗ ಜಯ ಸಾಧಿಸಿತು. ಬಾಡಗ ಪರ ರಮೇಶ್ ೨, ಮಯೂರ್ ೧ ಗೋಲು ದಾಖಲಿಸಿದರೆ, ದೇವಣಗೇರಿ ಪರ ಮಾಚಯ್ಯ ಏಕೈಕ ಗೋಲು ಹೊಡೆದರು.
ಎಂ.ಬಾಡಗ (ಬಿ) ನಾಲ್ಕೇರಿ ವಿರುದ್ಧ ೧-೦ ಗೋಲುಗಳ ಜಯಗಳಿಸಿತು. ಕೆ.ಬೋಪಣ್ಣ ಏಕೈಕ ಗೋಲು ಬಾರಿಸಿದರು.
೩-೧ ಗೋಲುಗಳ ಅಂತರದಲ್ಲಿ ಕಿಗ್ಗಾಲು ವಿರುದ್ಧ ನಾಪೋಕ್ಲು ನಗೆಬೀರಿತು. ನಾಪೋಕ್ಲು ಪರ ನಾಚಪ್ಪ ೨, ಚಿಟ್ಟಿಯ್ಯಪ್ಪ ೧ ಗೋಲು ದಾಖಲಿಸಿದರೆ, ಕಿಗ್ಗಾಲು ಪರ ದೇವಯ್ಯ ಒಂದು ಗೋಲು ಗಳಿಸಿದರು.
ಪೆನಾಲ್ಟಿ ಶೂಟೌಟ್‌ನಲ್ಲಿ ಹೊದ್ದೂರು ವಿರುದ್ಧ ಕುಂದ ೪-೩ ಗೋಲುಗಳ ಅಂತರದಲ್ಲಿ ವಿಜಯಸಾಧಿಸಿತು. ಹೊದ್ದೂರು ಪರ ಮಾಚಯ್ಯ, ಪೊನ್ನಣ್ಣ, ಗಣಪತಿ ತಲಾ ಒಂದು ಗೋಲು ಗಳಿಸಿದರೆ, ಕುಂದ ಪರ ಬೋಪಣ್ಣ, ನಾಣಯ್ಯ ಗೋಲು ಹೊಡೆದರು.
೨-೦ ಗೋಲುಗಳ ಅಂತರದಲ್ಲಿ ಬೇಗೂರು ತಂಡ ವಿರುದ್ಧ ಕಿರುಂದಾಡು ಜಯಸಾಧಿಸಿತು. ಕವನ್ ೨ ಗೋಲು ದಾಖಲಿಸಿದರು. ನಾಲ್ಕೇರಿ (ಎ) ವಿರುದ್ಧ ೧-೦ ಗೋಲುಗಳ ಅಂತರದಲ್ಲಿ ಚಂಗಪ್ಪ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಯವಕಪಾಡಿ ಗೆದ್ದು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಬಲಮುರಿ ವಿರುದ್ಧ ೨-೦ ಗೋಲುಗಳ ಅಂತರದಲ್ಲಿ ನೆಲಜಿ ಗೆಲುವು ಪಡೆದುಕೊಂಡಿತು. ನೆಲಜಿ ಪರ ಮೋನಿಷ್ ಹಾಗೂ ಮಧು ಅಯ್ಯಪ್ಪ ತಲಾ ಒಂದು ಗೋಲು ಗಳಿಸಿದರು.