ವೀರಾಜಪೇಟೆ, ನ. ೨೩: ಜನಸಾಮಾನ್ಯರಿಗೆ ಕೈಗೆಟುಕುವ ಹಾಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಮ್ಮ ಕ್ಲಿನಿಕ್ ಯೋಜನೆಯನ್ನು ಜಿಲ್ಲೆಯ ವೀರಾಜಪೇಟೆಯಲ್ಲಿ ಪ್ರಾರಂಭಿಸಿದ್ದು, ಜಿಲ್ಲೆಯ ಪ್ರಥಮ ಕ್ಲಿನಿಕ್ ಇದಾಗಿದೆ. ರಾಜ್ಯದ ಎಲ್ಲಾ ಕ್ಲಿನಿಕ್‌ಗಳನ್ನು ಏಕಕಾಲದಲ್ಲಿ ಉದ್ಘಾಟಿಸಲಾಗುವುದು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆಯ ಪುರಸಭೆ ವ್ಯಾಪ್ತಿಯ ಮೊಗರಗಲ್ಲಿಯಲ್ಲಿ ಪ್ರಾರಂಭಗೊಳ್ಳುತ್ತಿರುವ ನಮ್ಮ ಕ್ಲಿನಿಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ನಮ್ಮ ಕ್ಲಿನಿಕ್ ಸರ್ಕಾರಿ ಪ್ರಾಥಮಿಕ

(ಮೊದಲ ಪುಟದಿಂದ) ಆರೋಗ್ಯ ಕೇಂದ್ರ ಹೊರತಾಗಿ ನಗರ ಪಟ್ಟಣಗಳ ವಾರ್ಡ್ ಮಟ್ಟದಲ್ಲಿ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳ ಒತ್ತಡವನ್ನು ಕಡಿಮೆ ಮಾಡಲು ಇಂತಹ ಕ್ಲಿನಿಕ್ ಸಹಕಾರಿಯಾಗಲಿದೆ. ಪ್ರಸ್ತುತ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕ್ಲಿನಿಕ್ ಆಜುಬಾಜಿನಲ್ಲಿ ಸರ್ಕಾರಿ ಜಾಗ ಇದ್ದರೆ ಗುರುತಿಸುವಂತೆ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರಿಗೆ ಸೂಚಿಸಿದರು.

ರಾಜ್ಯದಲ್ಲಿ ಒಟ್ಟು ೪೩೮ ನಮ್ಮ ಕ್ಲಿನಿಕ್‌ಗಳಿವೆೆ. ಪೂರ್ವಾಹ್ನ ೯ರಿಂದ ೪.೩೦ ಗಂಟೆಯವರೆಗೆ ಆರೋಗ್ಯ ಸೇವೆ ಲಭಿಸಲಿದೆ. ಓರ್ವ ವೈದ್ಯ, ಶುಶ್ರೂಷಕಿ, ಲ್ಯಾಬ್ ಟೆಕ್ನೀಷಿಯನ್, ಓರ್ವ ಗ್ರೂಪ್ ಸಿ ನೌಕರರಿರುತ್ತಾರೆ. ತಪಾಸಣೆ, ಔಷಧ ಎಲ್ಲವೂ ಉಚಿತವಾಗಿದೆ. ೧೨ ಮಾದರಿಯ ಆರೋಗ್ಯ ತಪಾಸಣೆಗಳನ್ನು ನಡೆಸಲಾಗುತ್ತದೆ. ೧೪ ವಿವಿಧ ಪ್ರಯೋಗ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ ಇ ಸಂಜೀವಿನಿ ಮತ್ತು ಟೆಲಿಕೌನ್ಸಿಲಿಂಗ್ ವ್ಯವಸ್ಥೆಯೂ ಈ ಸೇವೆಯಲ್ಲಿ ಕೂಡಿರುತ್ತದೆ ಎಂದು ಮಾಹಿತಿ ನೀಡಿದರು.

ಶಾಸಕರ ಭೇಟಿ ಸಂದರ್ಭ ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಸದಸ್ಯರಾದ ಎಸ್.ಎಚ್. ಮತೀನ್, ಮನೆಯಪಂಡ ದೇಚಮ್ಮ ಕಾಳಪ್ಪ, ಜೂನಾ ಸುನೀತಾ, ಜಲೀಲ್, ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್, ಮೂಕೊಂಡ ಶಶಿ ಸುಬ್ರಮಣಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ ಮತ್ತಿತರರು ಇದ್ದರು.