ವೀರಾಜಪೇಟೆ, ನ. ೨೩: ದಂತ ಪರೀಕ್ಷಾ ಶಿಬಿರಗಳು ಬಹು ಮುಖ್ಯವಾಗಿದ್ದು ವ್ಯಕ್ತಿಯ ಜೀವನದಲ್ಲಿ ತನ್ನದೇ ಆದ ಪಾತ್ರ ವಹಿಸುತ್ತವೆ ಎಂದು ವೀರಾಜಪೇಟೆ ಕೊಡಗು ದಂತ ವೈದ್ಯಕೀಯ ಮಹಾ ವಿದ್ಯಾಲಯದ ಉಪಪ್ರಾಂಶುಪಾಲ ಹಾಗೂ ಪಬ್ಲಿಕ್ ಡೆಂಟಿಸ್ಟಿç ವಿಭಾಗದ ಮುಖ್ಯಸ್ಥ ಡಾ. ಜಿತೇಶ್ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ಎಂ.ಓ.ಯು ನ ಮೂಲಕ ನಡೆದ ಉಚಿತ ದಂತ ಪರೀಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದಂತ ಪರೀಕ್ಷೆ ಮೂಲಕ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ದಂತ ಕಾಲೇಜಿನ ವಿದ್ಯಾರ್ಥಿ ಅನುದರ್ಶ್ ದಂತ ಪರೀಕ್ಷಾ ವಿಧಾನ ಮತ್ತು ಪರಿಹಾರ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯಪಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್ ಸಾನಿಧ್ಯ ವಹಿಸಿ ಮಾತನಾಡಿದರು.

ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ ಉತ್ತಮವಾದ ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು ವಿದ್ಯಾರ್ಥಿ ಜೀವನದಿಂದಲೇ ಅದರ ಅರಿವು ಮೂಡಬೇಕು. ವಿದ್ಯಾರ್ಥಿಗಳು ದಂತ ರಕ್ಷಣೆಯನ್ನು ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಬಹುದೆಂದರು.

ಈ ಸಂದರ್ಭ ಉಪನ್ಯಾಸಕರಾದ ಹೇಮ, ಜೋಶಿಕಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿನಿಷಾ ಕಾರ್ಯಕ್ರಮ ನಿರ್ವಹಿಸಿದರು. ಉಚಿತ ದಂತ ಪರೀಕ್ಷಾ ಶಿಬಿರದಲ್ಲಿ ೨೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭ ಕೊಡಗು ದಂತ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.