ಮಡಿಕೇರಿ, ನ. ೨೨ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸದಾ ರಚನಾತ್ಮಕ ಮತ್ತು ಸಕಾರಾತ್ಮಕವಾಗಿ ಆಲೋಚನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಬೆಂಗಳೂರು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದÀ ಸಾಧನಾ ಅಶೋಕ್ ಪೋಟೆ ಸಲಹೆ ನೀಡಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ಘಟಕದ ವತಿಯಿಂದ ಕೊಡಗು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಂಯುಕ್ತಾಶ್ರಯದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ನಡೆದ ‘ಅಗ್ನಿವೀರ್’ ವಾಯುದಳ ನೇಮಕಾತಿ ಕುರಿತು ನಡೆದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವಕಾಶಗಳು ತಾನಾಗಿಯೇ ಬರುವುದಕ್ಕೆ ಕಾಯದೆ ಅವಕಾಶವನ್ನು ನಾವಾಗಿಯೇ ಸೃಷ್ಟಿಸಿಕೊಳ್ಳಬೇಕು. ನಿರಂತರ ಪ್ರಯತ್ನ ಮಾಡಿದರೆ ಮುಂದೆ ಉತ್ತಮ ಗುರಿ ಮತ್ತು ಫಲ ಪಡೆಯಲು ಸಾಧ್ಯ ಎಂದರು. ೧೯ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಅಧಿಕಾರಿ ಕರ್ನಲ್ ಚಾಕೊ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳಿದ್ದು, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ರಕ್ಷಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಜಗತ್ ತಿಮ್ಮಯ್ಯ, ಶಿಸ್ತು ಮತ್ತು ಸಂಯಮದಿAದ ನಾಗರೀಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಗುರುತಿಸಿಕೊಳ್ಳಬಹುದಾಗಿದೆ. ಅಗ್ನಿಪಥ್ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕ, ಯುವತಿಯರಿಗೆ ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳವಂತೆ ಸಲಹೆ ನೀಡಿದರು.
ವಿಂಗ್ ಕಮಾಂಡರ್ ಸಂತೋಷ್ ಶೆಡ್ಗೆ ಮಾತನಾಡಿ, ಅಗ್ನಿವೀರ್ ವಾಯುದಳ ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾಲೇಜಿನ ಎನ್‌ಸಿಸಿ ಆಫೀಸರ್ ಮೇಜರ್ ಡಾ.ರಾಘವ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ ರಕ್ಷಣಾ ವ್ಯವಸ್ಥೆಯ ಮಹತ್ವದ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಸಿ.ಎಂ.ಉಮಾ, ಕೊಡಗು ಜಿಲ್ಲಾ ಪ್ರಚಾರ ಉಸ್ತುವಾರಿ ಕೆ.ಪಿ.ದಿಲನ್ ಹಾಗೂ ಉಪನ್ಯಾಸಕ ಡಾ.ರಾಜೇಂದ್ರ ಉಪಸ್ಥಿತರಿದ್ದರು. ಎನ್‌ಸಿಸಿ ಕೆಡೆಟ್ ಸಯೋನ ಹಾಗೂ ತಂಡ ಪ್ರಾರ್ಥಿಸಿದರು. ಎನ್‌ಸಿಸಿ ನಾಯಕಿ ನಿಶ್ಚಿತ ನಿರೂಪಿಸಿ, ನಾಯಕ ಆದಿತ್ಯ ವಂದಿಸಿದರು.