ಸಿದ್ದಾಪುರ, ನ. ೨೨: ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಅವರು ಕರೆ ನೀಡಿದರು. ಮಾಲ್ದಾರೆ ಗ್ರಾಮದಲ್ಲಿ ಸಂಜೀವಿನಿ ಮಾಸಿಕ ಸಂತೆ ಹಾಗೂ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಮುಂದೆ ಬರಲು ಸರಕಾರವು ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾಭಿಮಾನ ಸ್ವಾವಲಂಬಿ ಬದುಕು ನಡೆಸ ಬೇಕೆಂದರು. ಸರ್ಕಾರವು ಮಹಿಳೆಯರ ಸ್ವಯಂ ಉದ್ಯೋಗಕ್ಕಾಗಿ ರೂ. ೧೦ ಲಕ್ಷ ಸಾಲ ನೀಡುತ್ತಿದೆ ಎಂದರು. ಮಹಿಳೆಯರು ತಾವು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆಯನ್ನು ಮಾಡಬೇಕು ಹಾಗೂ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಬೇಕೆಂದು, ಹಣ ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಬಾರದೆಂದು ಕಿವಿಮಾತು ಹೇಳಿದರು.
ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಟಿ.ಆರ್. ಸತೀಶ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸಬಲೀಕರಣ ನಡೆಯುತ್ತಿದ್ದು, ಮಹಿಳೆಯರು ಸ್ವಯಂ ಉದ್ಯೋಗದಿಂದ ಆರ್ಥಿಕವಾಗಿ ಬಲಗೊಂಡು ತಮ್ಮ ಕುಟುಂಬವನ್ನು ನಿರ್ವಹಿಸುತ್ತಿರು ವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಮಾತನಾಡಿ, ಗ್ರಾ.ಪಂ.ಯ ಅಭಿವೃದ್ಧಿಗೆ ಮಹಿಳಾ ಸಂಘಗಳು ಬೆನ್ನೆಲುಬಾಗಿ ಕಾರ್ಯನಿರ್ವಹಿ ಸುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪ, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಅಪ್ಪಣ್ಣ, ಪಿ.ಡಿ.ಓ. ರಾಜೇಶ್, ಸಂಜೀವಿನಿ ವಲಯ ಮೇಲ್ವಿಚಾರಕ ಸೋಮಶೇಖರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪಿ.ಎನ್. ಉಷ, ಓ.ಡಿ.ಪಿ. ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನೇಜಸ್, ಸಂಜೀವಿನಿ ಒಕ್ಕೂಟದ ಕೆ.ಟಿ. ಸುಜಿತಾ, ಸಿ. ಉಷಾ, ರೋಹಿಣಿ, ದೇವಯಾಣಿ ಇತರರು ಹಾಜರಿದ್ದರು.