ಕುಶಾಲನಗರ, ನ.೨೧: ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರಕ್ಕೆ ಈ ತಿಂಗಳ ಅಂತ್ಯದೊಳಗೆ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತೂಗು ಸೇತುವೆ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ತಾ. ೮ ರಿಂದ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ತೂಗು ಸೇತುವೆಯ ಕೆಳಭಾಗದಲ್ಲಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ಸೇತುವೆಯೊಂದನ್ನು ಇಲಾಖೆ ನಿರ್ಮಿಸಿದ್ದು, ಇದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ನದಿಗೆ ಅಡ್ಡಲಾಗಿ ಮರಳು ಮೂಟೆಗಳನ್ನು ಜೋಡಿಸಿ ನದಿಗೆ ನೀರು ಹರಿಯಲು ೯ ಬೃಹತ್ ಗಾತ್ರದ ಸಿಮೆಂಟ್ ಪೈಪುಗಳನ್ನು ಅಳವಡಿಸಲಾಗಿದೆ. ಅಂದಾಜು ೧೩೦ ಮೀ. ಉದ್ದದ ಈ ಸೇತುವೆ ಮೂಲಕ ಪ್ರವಾಸಿಗರಿಗೆ ನಿಸರ್ಗಧಾಮ ಕೇಂದ್ರಕ್ಕೆ ತೆರಳಲು ಸುರಕ್ಷತೆಯೊಂದಿಗೆ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಮ್ ‘ಶಕ್ತಿ’ಗೆ ತಿಳಿಸಿದ್ದಾರೆ.