ಕೋವರ್ ಕೊಲ್ಲಿ ಇಂದ್ರೇಶ್
ಬೆAಗಳೂರು, ನ. ೨೧: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಾಡಾನೆ ಹಾವಳಿ ತಡೆಗಟ್ಟುವ ಯತ್ನವಾಗಿ ಆನೆ ಟಾಸ್ಕ್ ಫೋರ್ಸ್ ರಚಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸೋಮವಾರ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅದ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಾಡಾನೆ ಹಾವಳಿ ಅಧಿಕವಾಗಿರುವ ಹಾಸನ, ಚಿಕ್ಕಮಗಳೂರು, ಮೈಸೂರು, ಮತ್ತು ಕೊಡಗು ಜಿಲ್ಲೆಗಳಲ್ಲಿ ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಆಯಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚಿಸಲಾಗುವುದು. ಟಾಸ್ಕ್ ಫೋರ್ಸ್ಗಳನ್ನು ತಕ್ಷಣದಿಂದಲೇ ರಚಿಸಿ ಕಾರ್ಯಪ್ರವೃತ್ತರಾಗಬೇಕಿದ್ದು, ಆಯಾ ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ಈ ಕೆಳಕಂಡAತೆ ಕಾರ್ಯನಿರ್ವಹಿಸಬೇಕಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸುವುದು, ಜನವಸತಿ, ಕೃಷಿ ಪ್ರದೇಶ ಹಾಗೂ ಕಾಫಿ ಎಸ್ಟೇಟ್ ಗಳಲ್ಲಿ ಆನೆಗಳ ಚಲನವಲನ ಗುರುತಿಸಿ ಅರಣ್ಯಕ್ಕೆ ಆನೆಗಳನ್ನು ಹಿಮ್ಮೆಟ್ಟಿಸುವುದು ಮುಂತಾದ ಕಾರ್ಯಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ಕೈಗೊಳ್ಳಬೇಕು.
ಕಾಡಾನೆ ಹಾವಳಿ ಕಂಡುಬರುವ ಸ್ಥಳಗಳಲ್ಲಿ ಆನೆಗಳ ಚಲನವಲನ ಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಅರಣ್ಯ ಪ್ರದೇಶದೊಳಗೆ ಸಂಚರಿಸದAತೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು.
ಪ್ರತಿ ಟಾಸ್ಕ್ ಫೋರ್ಸ್ ಕೇಂದ್ರ ಸ್ಥಾನದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿ ದೂರವಾಣಿ ಸಂಖ್ಯೆ ಯನ್ನು ಸಾರ್ವಜನಿಕರಿಗೆ ಪ್ರಚುರಪಡಿಸುವುದು.
ಆನೆಗಳನ್ನು ಹಿಮ್ಮೆಟ್ಟಿಸಲು ಅಗತ್ಯವಿರುವ ವಾಹನ, ವಾಕಿಟಾಕಿ, ಬಂದೂಕು, ಪಟಾಕಿ ಇನ್ನಿತರೆ ಅವಶ್ಯಕ ಸಲಕರಣೆಗಳನ್ನು ರಾಜ್ಯ ಅರಣ್ಯ ಇಲಾಖೆಯ ಮುಖ್ಯಸ್ಥರು (ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ) ಒದಗಿಸುವುದು
ಅರಣ್ಯ ಪಡೆ ಮುಖ್ಯಸ್ಥರು ಜಿಲ್ಲಾ ಟಾಸ್ಕ್ ಫೋರ್ಸ್ಗೆ ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕರನ್ನು ಸ್ಥಳ ನಿಯುಕ್ತಿಗೊಳಿಸಿ ಕೂಡಲೇ ಆದೇಶ ಹೊರಡಿಸುವುದು.
ಆನೆ ಹಾವಳಿ ಪ್ರದೇಶಗಳಿಗೆ ಕೂಡಲೇ ತಲುಪಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಟಾಸ್ಕ್ ಫೋರ್ಸ್ಗೆ ಮೂರು ಬೊಲೆರೋ ಜೀಪ್‌ಗಳನ್ನು ಒದಗಿಸಬೇಕು ಹಾಗೂ ಕ್ಯಾಂಟರ್ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನಿಯೋಜಿಸಬೇಕು. ಆನೆಗಳನ್ನು ಹಿಮ್ಮೆಟ್ಟಿಸುವ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆಯಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ..