ಶನಿವಾರಸಂತೆ, ನ. ೨೨: ಪಟ್ಟಣದ ಶ್ರೀ ಬೀರಲಿಂಗೇಶ್ವರ, ಪ್ರಬಲಭೈರವಿ ಹಾಗೂ ಪರಿವಾರ ದೇವರ ವಾರ್ಷಿಕ ಪೂಜಾ ಮಹೋತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಬೆಳಿಗ್ಗೆ ಗಂಗೆ ಪೂಜೆ, ಗೋಪೂಜೆ, ಮಂಗಳಾರತಿಯಾಗಿ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಕಳಶ, ಕುಂಭ ಹೊತ್ತ ಮಹಿಳೆಯರು ಮಂಗಳ ವಾದ್ಯದೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಆಗಮಿಸಿದರು.

ಶ್ರೀಗಣಪತಿ - ಪಾರ್ವತಿ- ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮಹಾಸಂಕಲ್ಪ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗವಾಯಿತು. ನಂತರ ಪರಿವಾರ ದೇವರುಗಳಾದ ಬಿದರೂರಿನ ಊರೊಡೆಯ ದೇವರು, ಬ್ರಹ್ಮದೇವರು, ಬಸವೇಶ್ವರ ದೇವರು, ಹೆಮ್ಮನೆ ಗ್ರಾಮದ ಮಾರಮ್ಮ ಮತ್ತು ಬಸವೇಶ್ವರ ದೇವರು, ತ್ಯಾಗರಾಜ ಕಾಲೋನಿಯ ಶ್ರೀ ಚಾಮುಂಡೇಶ್ವರಿ ದೇವಿ - ಶ್ರೀಗುಳಿಗ ದೈವದ ಕ್ಷೇತ್ರ, ವಿಜಯ ವಿನಾಯಕ ದೇವಸ್ಥಾನ ಬನ್ನಿಮಂಟಪ ಹಾಗೂ ಶ್ರೀರಾಮ ಮಂದಿರ ಎಲ್ಲಾ ದೇವಸ್ಥಾನಗಳಲ್ಲಿ ಮಹಾಪೂಜೆ, ಮಹಾಮಂಗಳಾರತಿ ನಡೆದು ಪ್ರಸಾದ ವಿನಿಯೋಗವಾಯಿತು.

ಮಧ್ಯಾಹ್ನ ಮುಖ್ಯರಸ್ತೆಯಲ್ಲಿರುವ ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಸೌಹಾರ್ದ ಸಭೆ ನಡೆಯಿತು. ಬಳಿಕ ಬೀರಲಿಂಗೇಶ್ವರ, ಪ್ರಬಲಭೈರವಿ ಹಾಗೂ ಪರಿವಾರ ದೇವಸ್ಥಾನದಲ್ಲಿ ಮಹಾಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗದೊಂದಿಗೆ ಮಧ್ಯಾಹ್ನದವರೆಗಿನ ಪೂಜಾ ಕಾರ್ಯ ನೆರವೇರಿತು.

ಸಂಜೆ ೫ ಗಂಟೆಯಿAದ ಬೀರಲಿಂಗೇಶ್ವರ, ಪ್ರಬಲಭೈರವಿ ಹಾಗೂ ಪರಿವಾರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಗಳಾದ ದೀಪಾರಾಧನೆ, ಗಣಪತಿ ಪೂಜೆ, ಪಂಚಗವ್ಯ, ಪುಣ್ಯಾಹ, ದೇವನಾಂದಿ, ನವಗ್ರಹ ಮತ್ತು ಮೃತ್ಯುಂಜಯ ಪೂಜೆ, ಹೋಮ, ಗಣಪತಿ- ಧನ್ವಂತರಿ ಹೋಮ, ಮೂಲ ದೇವರಿಗೆ ಫಲ- ಪಂಚಾಮೃತ ಅಭಿಷೇಕ, ಏಕವಾರು ರುದ್ರಾಭಿಷೇಕ, ಮಹಾಬಲಿ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರೋಕ್ಷಣೆ ಹಾಗೂ ಪ್ರಸಾದ ವಿನಿಯೋಗದೊಂದಿಗೆ ಪೂಜಾ ಮಹೋತ್ಸವ ಸಂಪನ್ನವಾಯಿತು. ದೇವಸ್ಥಾನ ಸೇವಾ ಸಮಿತಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು, ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.