ವರದಿ : ಚಂದ್ರಮೋಹನ್ ಕುಶಾಲನಗರ, ನ. ೨೨: ಏಳು ದಶಕಗಳನ್ನು ಕಂಡ ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿದ್ದರೂ, ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ.
೧೯೪೯ ರಲ್ಲಿ ಪ್ರೆಸರ್ಪೇಟ್ ಸ್ಕೂಲ್ ಎಕ್ಸ್ಟೆನ್ಷನ್ನಲ್ಲಿ ಅಂದಿನ ಕೂರ್ಗ್ ಚೀಫ್ ಕಮಿಷನರ್ ಆಗಿದ್ದ ದಿವಾನ್ ಬಹದ್ದೂರ್ ಸಿ.ಟಿ. ಮುದಲಿಯಾರ್ ಶಂಕುಸ್ಥಾಪನೆ ಮಾಡಿದ ಈ ಸರಕಾರಿ ಶಾಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಸಮಾಜದಲ್ಲಿ ಹಲವು ಸ್ಥಾನಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಈ ಸರಕಾರಿ ಶಾಲೆ ಮಾತ್ರ ಇನ್ನೂ ಶಿಥಿಲಗೊಂಡಿರುವ ಹಂಚಿನ ಕಟ್ಟಡಗಳ ಭೂತ ಬಂಗಲೆಯAತೆ ಗೋಚರಿಸುತ್ತಿದೆ. ಶಾಲೆ ಏಳು ದಶಕಗಳನ್ನು ಕಂಡರೂ ಈ ಶಾಲೆಗೆ ಮಾತ್ರ ಯಾವುದೇ ನೂತನ ಯೋಜನೆಗಳಾಗಲಿ, ಅನುದಾನಗಳಾಗಲಿ ದೊರಕದೆ ಅಭಿವೃದ್ಧಿ ಕುಂಠಿತಗೊAಡಿರುವ ದೃಶ್ಯ ಕಂಡುಬರುತ್ತಿದೆ.
(ಮೊದಲ ಪುಟದಿಂದ) ಸುಮಾರು ೪.೫ ಎಕರೆ ವಿಸ್ತೀರ್ಣ ಪ್ರದೇಶದ ಈ ಶಾಲೆ ಕುಶಾಲನಗರ ಪಟ್ಟಣ ಹೃದಯ ಭಾಗದಲ್ಲಿದ್ದು, ಕ್ರೀಡೆ ಮತ್ತಿತರ ಸಾಮಾಜಿಕ ಚಟುವಟಿಕೆಗಳು ಆವರಣದಲ್ಲಿ ನಿರಂತರವಾಗಿ ನಡೆಯುತ್ತಿರುವುದನ್ನು ಗಮನಿಸಬಹುದು. ಆದರೆ ಶಾಲೆ ಮಾತ್ರ ತನ್ನ ಬೆಳ್ಳಿಹಬ್ಬವನ್ನಾಗಲಿ, ಸುವರ್ಣ ಮಹೋತ್ಸವವನ್ನಾಗಲಿ ಇನ್ನೂ ಆಚರಿಸಿಕೊಂಡಿಲ್ಲ.
ಜಿಲ್ಲೆಯ ಪ್ರತಿಷ್ಠಿತ ಸರಕಾರಿ ಶಾಲೆಯಲ್ಲಿ ಪ್ರಸಕ್ತ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಕನಿಷ್ಟ ಮೂಲ ಸೌಲಭ್ಯಗಳ ಕೊರತೆ ಕಂಡುಬAದಿದೆ. ಹಲವು ದಶಕಗಳ ಹಿಂದೆ ಶಾಲಾ ಆವರಣದಲ್ಲಿ ಕೊಳವೆ ಬಾವಿಯೊಂದನ್ನು ನಿರ್ಮಿಸಲಾಗಿದ್ದು, ಅದು ಸಮರ್ಪಕ ನಿರ್ವಹಣೆ ಇಲ್ಲದೆ ಮಣ್ಣು ತುಂಬುತ್ತಿದೆ.
ಪ್ರಸಕ್ತ ಶಾಲಾ ಆವರಣದಲ್ಲಿ ಸುಮಾರು ೭೫೦ ವಿದ್ಯಾರ್ಥಿಗಳಿದ್ದು, ಬಹುತೇಕ ಬಡ ಕುಟುಂಬದ ಮಕ್ಕಳು ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಶಾಲೆಗೆ ಸ್ಥಳೀಯ ರೋಟರಿ ಸಂಸ್ಥೆ ಕುಡಿಯುವ ನೀರಿಗಾಗಿ ಲಕ್ಷಾಂತರ ವೆಚ್ಚದಲ್ಲಿ ಶುದ್ಧೀಕರಣ ಘಟಕವೊಂದನ್ನು ನಿರ್ಮಿಸಿಕೊಟ್ಟಿದ್ದು, ಅದೂ ಕೂಡ ನಿರ್ವಹಣೆ ಕೊರತೆಯಿಂದ ತನ್ನ ಕೆಲಸವನ್ನು ಸ್ಥಗಿತಗೊಳಿಸಿದೆ. ಶಾಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸಬೇಕಾದರೆ ಇದ್ದ ಒಂದು ಸಭಾಂಗಣದ ಕಟ್ಟಡ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಶಾಲೆ ಆವರಣದಲ್ಲಿ ಮೌಲಾನ ಆಜಾದ್ ಪ್ರಾಥಮಿಕ ಶಾಲೆಗೆ ಕೂಡ ತಾತ್ಕಾಲಿಕವಾಗಿ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿನಿಯರ ಪ್ರೌಢಶಾಲೆ ಕೂಡ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ.
ಶಾಲಾ ಸಭಾಂಗಣ ದುರಸ್ತಿಗೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಮೂಲಕ ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಹೆಚ್ಚುವರಿ ಕೊಠಡಿ ಮತ್ತು ಶೌಚಾಲಯ ಕಟ್ಟಡಗಳಿಗೆ ರೂ.೧೪ ಲಕ್ಷದ ಕ್ರಿಯಾಯೋಜನೆ ಅನುಮೋದನೆಗೊಂಡಿದೆ ಎಂದು ತಿಳಿಸಿದ್ದಾರೆ. ಶಾಲಾ ಆವರಣ ಗೋಡೆ ಈ ಸಾಲಿನ ಮಳೆಗಾಲದಲ್ಲಿ ಕುಸಿದು ಬಿದ್ದಿದ್ದು, ಮಳೆಹಾನಿ ಯೋಜನೆ ಅಡಿ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ ಎಂದು ಸುರೇಶ್ ಮಾಹಿತಿ ನೀಡಿದ್ದಾರೆ.
ಇಷ್ಟೆಲ್ಲಾ ಕಷ್ಟಗಳ ನಡುವೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ತಂಡ ಶಾಲಾ ಅಭಿವೃದ್ಧಿ ಸಮಿತಿಯೊಂದಿಗೆ ಸೇರಿ ಅಲ್ಪಸ್ವಲ್ಪ ಸೌಲಭ್ಯ ಕಲ್ಪಿಸುವಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಶಾಲೆಗೆ ಯಾವುದೇ ಸ್ವಂತ ಆದಾಯ ಇಲ್ಲದ ಕಾರಣ ಹೆಚ್ಚಿನ ಸೌಲಭ್ಯವನ್ನು ಪಡೆಯಲು ಅಸಾಧ್ಯವಾಗುತ್ತಿದೆ ಎನ್ನುವುದು ಇಲ್ಲಿನ ಆಡಳಿತ ಮಂಡಳಿಯ ಅಳಲಾಗಿದೆ. ಶಾಲಾ ಆವರಣದ ಒಳ ಭಾಗದಲ್ಲಿ ಸ್ಥಳೀಯ ಕಾವೇರಿ ಪರಿಸರ ರಕ್ಷಣಾ ಬಳಗದ ಮೂಲಕ ಗಿಡ ಮರಗಳನ್ನು ನೆಟ್ಟು ಬೆಳೆÀಸಲಾಗಿದ್ದು, ಈ ಮೂಲಕ ಉತ್ತಮ ಪರಿಸರ ಕಾಣಬಹುದು. ಶಾಲಾ ಹೊರ ಭಾಗದಲ್ಲಿ ಮುಖ್ಯ ರಸ್ತೆ ಒತ್ತಿನಲ್ಲಿ ವಿದ್ಯಾರ್ಥಿಗಳು ತೆರಳುವ ದಾರಿಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಒಂದು ತೆರವುಗೊಳಿಸದೆ ಅಪಾಯದೊಂದಿಗೆ ಓಡಾಡಲು ಕೂಡ ಕಷ್ಟವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ.
ಇದರೊAದಿಗೆ ಸ್ಥಳೀಯ ಸಂಘ ಸಂಸ್ಥೆಗಳು ಶಾಲಾ ಅವಧಿಯಲ್ಲಿ ಕ್ರಿಕೆಟ್ ಮತ್ತಿತರ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಪಾಠ, ಪ್ರವಚನಕ್ಕೆ ಕಿರಿಕಿರಿ ಉಂಟಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಶಾಲಾ ಅವಧಿಯಲ್ಲಿ ಮೈಕ್ ಅಳವಡಿಸಿಕೊಂಡು ಕಾರ್ಯಕ್ರಮಗಳು ನಡೆಯುವುದು ಇದಕ್ಕೆ ಕಾರಣವಾಗಿದೆ. ಇಂತಹ ಚಟುವಟಿಕೆಗಳಿಗೆ ಇಲಾಖಾ ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ ಎನ್ನುವುದು ವಿದ್ಯಾರ್ಥಿಗಳ ಪೋಷಕರ ಆಗ್ರಹವಾಗಿದೆ.
ಸಂಘ ಸಂಸ್ಥೆಗಳು ಅಥವಾ ಶಾಲೆಯ ಹಳೆಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಯತ್ತ ಮನಸ್ಸು ಮಾಡಿದಲ್ಲಿ ಶಾಲೆಯ ಕನಿಷ್ಟ ಅಭಿವೃದ್ಧಿ ಸಾಧ್ಯ ಎನ್ನುವುದು ಇಲ್ಲಿನ ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿಯ ಆಶಯವಾಗಿದೆ.
ಶಾಲೆಯ ವಿದ್ಯುತ್ ಬಿಲ್ ಪಾವತಿಸಲು ಕೂಡ ಕೆಲವೊಮ್ಮೆ ಪರದಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಶಾಲಾ ಕಟ್ಟಡಗಳಂತೂ ನಿರ್ವಹಣೆ ಕಾಣದೆ ದಶಕಗಳೇ ಸಂದಿವೆ. ಇಷ್ಟೆಲ್ಲದರ ನಡುವೆ ಶಾಲೆಗೆ ಬರುವ ವಿದ್ಯಾರ್ಥಿಗಳು ಇದುವರೆಗೆ ಉತ್ತಮ ಫಲಿತಾಂಶ ನೀಡುವಲ್ಲಿ ಮಾತ್ರ ಯಶಸ್ಸು ಕಾಣುತ್ತಿರುವುದು ಸೋಜಿಗದ ಸಂಗತಿ ಎಂದರೆ ತಪ್ಪಾಗಲಾರದು. ವಿಶೇಷ ಅನುದಾನ ಕಲ್ಪಿಸುವ ಮೂಲಕ ದಶಕಗಳ ಇತಿಹಾಸ ಹೊಂದಿರುವ ಕುಶಾಲನಗರದ ಸರಕಾರಿ ಶಾಲೆಗೆ ಕಾಯಕಲ್ಪ ಕಲ್ಪಿಸುವಲ್ಲಿ ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಬೇಕು.