ಮಡಿಕೇರಿ, ನ.೨೨ : ಸ್ವಾತಂತ್ರö್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕವನ್ನು ಬೆಂಗಳೂರಿನಲ್ಲೂ ನಿರ್ಮಾಣ ಮಾಡುತ್ತೇವೆ ಮತ್ತು ಅವರ ವಿಚಾರಧಾರೆಗಳನ್ನು ಮುಂದೆ ಪಠ್ಯಗಳಲ್ಲೂ ಅಳವಡಿಸುತ್ತೇವೆೆ. ಎಲ್ಲಾ ಸಾಧನೆಗಳಿಗೆ ಸಾಧಕರ ಹೆಸರುಗಳೇ ಸ್ಫೂರ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇತ್ತೀಚೆಗೆ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಲೋಕಾರ್ಪಣೆ ಮಾಡಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರು ವ್ಯಾಪಾರಕ್ಕೆಂದು ಬಂದು ದೇಶದಲ್ಲಿ ದ್ವೇಷ ಹುಟ್ಟಿಸಿ ಆಡಳಿತ ಮಾಡಿದರು. ರೈತ ಕುಟುಂಬದಲ್ಲಿ ಹುಟ್ಟಿದ ರಾಮಯ್ಯ ಗೌಡರು ಹೋರಾಟಗಾರರಾಗುತ್ತಲೇ ಕ್ರಾಂತಿಯಾಯಿತು ಎಂದರು.
೧೮೩೭ರ ಕಾಲಘಟ್ಟದಲ್ಲಿ ಬ್ರಿಟಿಷರ ಕ್ರೌರ್ಯದ ಆಡಳಿತ ವಾಕ್ ಸ್ವಾತಂತ್ರ‍್ಯ ಸೇರಿದಂತೆ ಎಲ್ಲಾ ಸ್ವಾತಂತ್ರö್ಯವನ್ನು ಕಿತ್ತು ಕೊಂಡಿತ್ತು. ಅಂತಹ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಪಡೆಯನ್ನು ಕಟ್ಟಿ, ಹೋರಾಡಿದ ಕೆದಂಬಾಡಿ ರಾಮಯ್ಯ ಗೌಡರ ಧೈರ್ಯ ಮತ್ತು ಸಾಹಸ ನಿಜಕ್ಕೂ ಅಭಿನಂದನೀಯ. ಅವರ ಪ್ರತಿಮೆ ನಿರ್ಮಾಣ ಮಾಡಿರುವುದು ಶ್ಲಾಘನೀಯ ಕಾರ್ಯವೆಂದು ಮುಖ್ಯಮಂತ್ರಿ ಹೇಳಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವರಾದ ಎಸ್.ಅಂಗಾರ, ಅಶ್ವಥ್ ನಾರಾಯಣ, ಶಾಸಕರಾದ ಯು.ಟಿ.ಖಾದರ್, ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಕೊಡಗು ಗೌಡ ಫೆಡರೇಷನ್ ಅಧ್ಯಕ್ಷ ಸೂರ್ತಲೆ ಸೋಮಣ್ಣ ಸೇರಿದಂತೆ ಕೊಡಗು ಜಿಲ್ಲೆಯ ಗೌಡ ಸಮುದಾಯದ ಮಂದಿ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿದ್ದರು.