ಕಣಿವೆ, ನ. ೨೧: ಕಾಡಂಚಿನ ಗ್ರಾಮಗಳಲ್ಲಿ ರೈತರ ಬೆಳೆಗಳನ್ನು ಹಾನಿಪಡಿಸುವ ಕಾಡಾನೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕುಶಾಲನಗರ ತಾಲೂಕಿನ ಭುವನಗಿರಿ, ಕಣಿವೆ ಹಾಗೂ ಚಿನ್ನೇನಹಳ್ಳಿ ಮಾರ್ಗದಲ್ಲಿ ಸೋಮವಾರಪೇಟೆ ವಲಯದ ಅರಣ್ಯ ಇಲಾಖೆ ಕೈಗೊಂಡಿರುವ ಆನೆ ಕಂದಕ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯ ಕೃಷಿಕರು ಆರೋಪಿಸಿದ್ದಾರೆ.

ಅರಣ್ಯದಂಚಿನಲ್ಲಿ ಲಕ್ಷಾಂತರ ರೂಪಾಯಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸುಮಾರು ೮೦೦ ಮೀಟರ್ ಉದ್ದದ ಮಾರ್ಗದಲ್ಲಿ ಕೈಗೊಂಡಿರುವ ಆನೆಕಂದಕ ಕಾಮಗಾರಿ ಸಮರ್ಪಕವಾಗಿಲ್ಲ. ಕಂದಕ ತೆಗೆಯುವ ಮಾರ್ಗದಲ್ಲಿ ಅಲ್ಲಲ್ಲಿ ಕಲ್ಲು ಬಂಡೆಗಳು, ಕಲ್ಲು ರಾಶಿಗಳು ಸಿಕ್ಕ ಕಡೆ ಹಾಗೆಯೇ ಬಿಟ್ಟು ಉಳಿದೆಡೆಗಳಲ್ಲಿ ಕಂದಕ ತೆಗೆದಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿ ಕೇಳಿದರೆ ಕಲ್ಲು ಬಂಡೆಗಳನ್ನು ಸಿಡಿಸಿ ಕಂದಕ ಸಿದ್ಧಗೊಳಿಸುವುದಾಗಿ ಹೇಳುತ್ತಿದ್ದಾರೆ. ಆದರೆ ವನ್ಯ ಪ್ರಾಣಿಗಳಿಗೆ ಘಾಸಿಗೊಳಿಸಿ ಅವುಗಳ ಚಲನ ವಲನಗಳಿಗೆ ಧಕ್ಕೆಯಾಗುವಂತೆ ಬಂಡೆಗಳನ್ನು ಸಿಡಿಸಿ ಸ್ಪೋಟಿಸುವ ಕಾಮಗಾರಿ ಮಾಡುವ ಮೊದಲು ಕಲ್ಲು ಬಂಡೆಗಳು ಇರುವೆಡೆಗಳಲ್ಲಿ ರೈಲ್ವೆ ಕಂಬಿಗಳನ್ನು ಜೋಡಿಸುವ ಕಾಮಗಾರಿ ಮಾಡುವ ಮೂಲಕ ಕಾಡಾನೆಗಳ ನಿಗ್ರಹಕ್ಕೆ ಮುಂದಾಗಲಿ ಎಂದು ಕೃಷಿಕ ಚಿನ್ನೇನಹಳ್ಳಿ ಗ್ರಾಮದ ರಾಜಶೇಖರ್ ಸಲಹೆ ನೀಡಿದ್ದಾರೆ. ಅರಣ್ಯ ಇಲಾಖೆ ಕಂದಕ ತೆಗೆಯಲು ವ್ಯಯ ಮಾಡುವ ಹಣವನ್ನು ಕಾಡಂಚಿನ ಕೃಷಿಕರಿಗೆ ವಿತರಿಸಿದ್ದಲ್ಲಿ ಕೃಷಿಕರು ತಾವೇ ಸ್ವತಃ ಮುಂದೆ ಬಂದು ಗುಣಮಟ್ಟದ ಸೋಲಾರ್ ತಂತಿ ಬೇಲಿ ಅಳವಡಿಸಿಕೊಂಡು ಉತ್ತಮವಾಗಿಯೇ ನಿರ್ವಹಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಇಲಾಖೆ ಏಕೆ ಚಿಂತಿಸಬಾರದು ಎಂದು ರೈತ ರಾಜಶೇಖರ್ ಒತ್ತಾಯಿಸಿದ್ದಾರೆ. ಇಲಾಖೆಯ ವತಿಯಿಂದ ಮಾಡುತ್ತಿರುವ ಕಂದಕ ಕಾಮಗಾರಿಯಿಂದಾಗಿ ಕಾಡಂಚಿನ ಕೃಷಿಕರು ಬೆಳೆದ ಬೆಳೆ ಕಾಡಾನೆಗಳ ಪಾಲಾಗದಿರಲಿ ಎಂದು ಆಶಿಸಿದ್ದಾರೆ. - ಕೆ.ಎಸ್. ಮೂರ್ತಿ