ಚೆಟ್ಟಳ್ಳಿ, ನ. ೨೦: ‘ಕಸಿನ್ಸ್ ಚೋಕ್ ಟಿಸಿ’ ಆಶ್ರಯದಲ್ಲಿ ನಲ್ವತ್ತೋಕ್ಲುವಿನಲ್ಲಿ ನಡೆದ ಮೊದಲನೇ ವರ್ಷದ ಜಿಲ್ಲಾಮಟ್ಟದ ಗ್ರಾಮಾಂತರ ವಾಲಿಬಾಲ್ ಪಂದ್ಯಾವಳಿಯಲ್ಲಿ ಸ್ಪಪ್ನ ಮಾರ್ಟ್ ಗುಂಡಿಕೆರೆ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿದೆ.

ಜೆಡ್.ವೈ.ಸಿ ಕೊಟ್ಟಮುಡಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಸ್ವಪ್ನ ಮಾರ್ಟ್ ತಂಡವು ೨-೧ ಸೆಟ್‌ಗಳ ಅಂತರದಿAದ ಗೆದ್ದು ಫೈನಲ್ ಪ್ರಶಸ್ತಿ ಗೆದ್ದಿತು. ಇದಕ್ಕೂ ಮೊದಲು ಮೊದಲನೆಯ ಸೆಮಿಫೈನಲ್ ಪಂದ್ಯವು ಸ್ವಪ್ನ ಮಾರ್ಟ್ ಹಾಗೂ ಡೆಕ್ಕನ್ ನಾಪೋಕ್ಲು ತಂಡಗಳ ನಡುವೆ ನಡೆಯಿತು. ಸ್ವಪ್ನ ಮಾರ್ಟ್ ತಂಡವು ಡೆಕ್ಕನ್ ತಂಡವನ್ನು ೨-೧ ಸೆಟ್‌ಗಳ ಅಂತರದಿAದ ಗೆದ್ದು ಫೈನಲ್ ಪ್ರವೇಶಿಸಿತು.

ಎರಡನೇ ಸೆಮಿಫೈನಲ್ ಪಂದ್ಯವು ಸಿಗ್ನೇಚರ್ ಬಾಣಂಗಾಲ ಹಾಗೂ ಜೆಡ್.ವೈ.ಸಿ ಕೊಟ್ಟಮುಡಿ ತಂಡಗಳ ನಡುವೆ ನಡೆಯಿತು. ೨-೧ ಸೆಟ್‌ಗಳ ಅಂತರದಿAದ ಕೊಟ್ಟಮುಡಿ ತಂಡ ಗೆದ್ದು ಫೈನಲ್ ಪ್ರವೇಶಿಸಿತು.

ಪಂದ್ಯಾವಳಿಯ ಬೆಸ್ಟ್ ಪ್ಲೇಯರ್ ಆಗಿ ಸ್ವಪ್ನ ಮಾರ್ಟ್ ತಂಡದ ಸಿಯಾಬ್ ಗುಂಡಿಕೆರೆ, ಬೆಸ್ಟ್ ಆಲ್‌ರೌಂಡರ್ ಆಗಿ ಅಮ್ಮಿ ಕೊಟ್ಟಮುಡಿ, ಬೆಸ್ಟ್ ಅಟೇಕರ್ ಸ್ವಪ್ನ ಮಾರ್ಟ್ ತಂಡದ ಸುಹೈಲ್ ಗುಂಡಿಕೆರೆ ಹಾಗೂ ಬೆಸ್ಟ್ ಲಿಬ್ರೋ ಪ್ರಶಸ್ತಿಯನ್ನು ಡೆಕ್ಕನ್ ತಂಡದ ಚಿನ್ನು ಪಡೆದುಕೊಂಡರು. ಪಂದ್ಯಾವಳಿಯಲ್ಲಿ ಒಟ್ಟು ೩೦ ತಂಡಗಳು ಭಾಗವಹಿಸಿದ್ದವು.

ಸಮಾರೋಪ ಸಮಾರಂಭ

ಪೊನ್ನAಪೇಟೆ : ಜಾತಿ, ಮತ-ಧರ್ಮಗಳ ಭೇದವಿಲ್ಲದೆ ನಡೆಯುವ ಕ್ರೀಡಾಕೂಟಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಕ್ರೀಡಾಕೂಟಗಳ ಆಯೋಜನೆ ಮತ್ತಷ್ಟು ಹೆಚ್ಚುವಂತಾಗಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರೂ ಆಗಿರುವ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅಭಿಪ್ರಾಯಪಟ್ಟರು.

ವಾಲಿಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಮನುಷ್ಯನನ್ನು ದೈಹಿಕವಾಗಿ ಸದೃಢಗೊಳಿಸುವ ಕ್ರೀಡೆ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಬೇಕು. ವಿವಿಧ ಕಾರಣಗಳಿಂದ ದಾರಿತಪ್ಪುತ್ತಿರುವ ಯುವಕರನ್ನು ಮತ್ತೆ ಸರಿದಾರಿಗೆ ತರುವ ಸಾಮರ್ಥ್ಯ ಇರುವುದು ಕ್ರೀಡೆಗೆ ಮಾತ್ರ. ಯುವಕರಲ್ಲಿ ಇಂದು ಹೆಚ್ಚಾಗಿ ಕಂಡು ಬರುತ್ತಿರುವ ಆರೋಗ್ಯ ಸಮಸ್ಯೆಗೂ ಕ್ರೀಡೆ ಪರಿಹಾರವನ್ನು ಒದಗಿಸುತ್ತದೆ. ಆದ್ದರಿಂದ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತಾಗಬೇಕು ಎಂದು ಸೂಫಿ ಹಾಜಿ ಅವರು ಇದೇ ಸಂದರ್ಭದಲ್ಲಿ ಯುವಕರಿಗೆ ಕಿವಿಮಾತು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಡಿ.ಎಫ್. ಅಶ್ರಫ್ ಆಲಿ, ಕಾರ್ಯದರ್ಶಿ ದುದ್ದಿಯಂಡ ಯೂಸುಫ್ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಗ್ರಾಮದ ಪ್ರಮುಖರು ಭಾಗವಹಿಸಿದ್ದರು. ಕ್ರೀಡಾಕೂಟದ ಆಯೋಜಕರಾದ ಎಂ.ಎ. ರಫೀಕ್, ಡಿ.ವೈ. ನಿಶಾದ್, ರಾಫಿ, ಇಮ್ರಾನ್, ಮುಝಮ್ಮಿಲ್, ಸಂಶೀರ್ ಮೊದಲಾದವರು ಕ್ರೀಡಾಕೂಟದ ಉಸ್ತುವಾರಿ ವಹಿಸಿಕೊಂಡಿದ್ದರು. ಝುಬೈರ್ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡಿದರು.