*ಗೋಣಿಕೊಪ್ಪಲು, ನ. ೨೦: ಖಾಸಗಿ ಜಮೀನು ಮತ್ತು ಕೃಷಿ ಭೂಮಿಗಳ ಬಳಿ ಬಲೆಗಳು ಅಥವಾ ಉರುಳು ಹಾಕುವುದು, ವನ್ಯಪ್ರಾಣಿಗಳನ್ನು ಬೇಟೆಯಾಡುವುದು, ಸಂರಕ್ಷಿತ ಪ್ರದೇಶಗಳಿಗೆ ಅತಿಕ್ರಮವಾಗಿ ಪ್ರವೇಶಿಸುವುದು ಕಾನೂನುಬಾಹಿರ ಚಟುವಟಿಕೆಯಾಗಿದೆ. ವನ್ಯಜೀವಿ ಸಂರಕ್ಷಣೆ ಕಾಯಿದೆ ೧೯೭೨ರ ಪ್ರಕಾರ ಇದು ಗಂಭೀರ ಅಪರಾಧವಾಗಿದ್ದು, ೩ ರಿಂದ ೭ ವರ್ಷಗಳ ಜೈಲುವಾಸ ಮತ್ತು ರೂ. ೫೦ ಸಾವಿರದಿಂದ ರೂ. ೨ ಲಕ್ಷದವರೆಗೆ ದಂಡ ವಿಧಿಸುವ ಪ್ರಕರಣವಾಗಿರುತ್ತದೆ. ಇಂತಹ ಪ್ರಕರಣಗಳು ಮರುಕಳಿಸಿದ ಸಂದರ್ಭದಲ್ಲಿ ೭ ವರ್ಷಗಳವರೆಗೆ ಜೈಲುವಾಸ ಮತ್ತು ರೂ. ೫೦ ಲಕ್ಷಗಳವರೆಗೆ ದಂಡ ವಿಧಿಸುವ ಕಾನೂನು ಜಾರಿಯಲ್ಲಿದೆ.

ಆದ್ದರಿಂದ ಸ್ವಂತ ಜಮೀನಿನಲ್ಲಿ ಅಥವಾ ಕೃಷಿ ಪ್ರದೇಶಗಳಲ್ಲಿ ಬಲೆಗಳು, ಉರುಳುಗಳಿದ್ದಲ್ಲಿ ಅವುಗಳನ್ನು ಶೀಘ್ರದಲ್ಲೇ ತೆರವುಗೊಳಿಸಬೇಕು. ಬೇರೆ ಜಮೀನುಗಳಲ್ಲಿ ಯಾವುದೇ ರೀತಿಯ ಉರುಳುಗಳು, ಬಲೆಗಳು ಪತ್ತೆಯಾದಲ್ಲಿ ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅರಣ್ಯ ಇಲಾಖೆಯಿಂದ ಕಾಲಕಾಲಕ್ಕೆ ಅರಣ್ಯದಂಚಿನ ಗಡಿಭಾಗಗಳಲ್ಲಿ ಉರುಳುಗಳ, ಬಲೆಗಳ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿರುತ್ತದೆ. ಅಂತಹ ಸಂದರ್ಭಗಳಲ್ಲಿ ಖಾಸಗಿ ಜಮೀನುಗಳಲ್ಲಿ ಅಥವಾ ಕೃಷಿ ಭೂಮಿಗಳಲ್ಲಿ ಉರುಳುಗಳು, ಬಲೆಗಳು ಪತ್ತೆಯಾದಲ್ಲಿ ಜಮೀನಿನ ಮಾಲೀಕರನ್ನೇ ಹೊಣೆಗಾರರನ್ನಾಗಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.