ಕೊಡ್ಲಿಪೇಟೆ,ನ.೨೦: ಸಮೀಪದ ದೊಡ್ಡಕುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಯಲ್ಲಮ್ಮ ದೇವಸ್ಥಾನದ ಲೋಕಾರ್ಪಣೆ ಮತ್ತು ನೂತನ ವಿಗ್ರಹ ಪ್ರತಿಷ್ಠಾಪನೆ, ಶ್ರೀ ಮಾರಿಯಮ್ಮ ದೇವಿಯ ವಾರ್ಷಿಕ ಪೂಜಾ ಮಹೋತ್ಸವ ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಶ್ರೀ ಮಾರಿಯಮ್ಮ ಮತ್ತು ಯಲ್ಲಮ್ಮ ದೇವಸ್ಥಾನ ಸಮಿತಿಯ ವತಿಯಿಂದ ಆಯೋಜಿಸಿದ್ದ ಪೂಜಾ ಮಹೋತ್ಸವದಲ್ಲಿ ಗ್ರಾಮಸ್ಥರು ಹಬ್ಬದ ಸಂಭ್ರಮದAತೆ ಭಾಗಿಯಾಗಿದ್ದರು. ನೂತನ ದೇವಸ್ಥಾನದ ಪೂಜಾ ವಿಧಿ ವಿಧಾನಗಳು ಗಂಗಾ ಪ್ರವೇಶದೊಂದಿಗೆ ಪ್ರಾರಂಭವಾಗಿ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಕಾರ್ತಿಕ ಮಾಸದ ವಾರ್ಷಿಕ ಪೂಜಾ ಉತ್ಸವ ನಡೆಯಿತು.
ನೂತನ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಅಮ್ಮನವರಿಗೆ ಜೀವ ಕಳೆ ತುಂಬುವುದು ಮತ್ತು ಅಭಿಷೇಕ, ಅಲಂಕಾರ ನಡೆಯಿತು. ಶ್ರೀ ಕ್ಷೇತ್ರ ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿಗಳ ನೇತೃತ್ವದಲ್ಲಿನ ದೇವಿಗೆ ಮಹಾಮಂಗಳಾರತಿ ಹಾಗೂ ಕಲಶಾರೋಹಣ ಜರುಗಿತು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮಿಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮಿಜಿಗಳು ಭಾಗವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿ ಅಧ್ಯಕ್ಷÀ, ನಿವೃತ್ತ ಶಿಕ್ಷಕ ಜವರೇಗೌಡ ಮಾಸ್ಟರ್ ವಹಿಸಿದ್ದರು. ದೇವಸ್ಥಾನ ನಿರ್ಮಾಣದ ನೇತೃತ್ವ ವಹಿಸಿದ್ದ ರಾಜ್ಯ ಪ್ರಶಸ್ತಿ ವಿಜೇತ ಶಿಲ್ಪಿಗಳಾದ ವರಪ್ರಸಾದ್, ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪಾವನ, ಹನೀಫ್, ದಿನೇಶ್‌ಕುಮಾರ್, ತೂಕ ಮತ್ತು ಅಳತೆ ಇಲಾಖೆಯ ಸಹಾಯಕ ನಿರೀಕ್ಷಕ ಡಿ.ಆರ್.ಲಿಂಗರಾಜ್, ಕೆಎಸ್‌ಆರ್‌ಟಿಸಿ ನೌಕರ ಮೋಹನ್‌ಕುಮಾರ್ ಅವರುಗಳು ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಡಿ.ಆರ್.ವೇದ್‌ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ದೊಡ್ಡಕುಂದ, ರಾಮೇನಹಳ್ಳಿ, ಕಿರಿಕೊಡ್ಲಿ, ಚಿಕ್ಕಾಕುಂದ, ಬ್ಯಾಡಗೊಟ್ಟ, ಕಣಾರಳ್ಳಿ, ಮಲ್ಲಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.