ವೀರಾಜಪೇಟೆ, ನ. ೧೯: ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪ್ರಾಚೀನ ಕಾಲದ ದೇಗುಲ ಇದಾಗಿದ್ದು, ಪ್ರತಿವರ್ಷ ಕಾರ್ತಿಕ ಕೃಷ್ಣಪಕ್ಷದ ಕಾಲಭೈರವ ಅಷ್ಟಮಿಯಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಕ್ರಮ ನಡೆದು ದೇವರ ಮೂರ್ತಿಯ ಅಲಂಕಾರ, ಅಭಿಷೇಕ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ಜರುಗಿತು.
ಭಕ್ತರು ಹರಕೆಯ ಪ್ರತಿಯಾಗಿ ಗೋವು ಕರುಗಳ ಮೂರ್ತಿ ಪ್ರತಿಮೆಯನ್ನು ದೇವಸ್ಥಾನದಲ್ಲಿ ಅರ್ಪಿಸಿದರು. ಅರ್ಚಕ ವೇಣುಗೋಪಾಲ್ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ತದನಂತರ ದೇವಸ್ಥಾನದ ವಾರ್ಷಿಕ ಮಹಾಸಭೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು, ಗ್ರಾಮಸ್ಥರು ಹಾಜರಿದ್ದರು.