ಸೋಮವಾರಪೇಟೆ, ನ. ೧೯: ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ಕಳೆದ ಒಂದು ವಾರದಿಂದ ನಡೆದ ಜೇಸಿ ಸಪ್ತಾಹ ೨೦೨೨, ಹಲವು ವೈವಿಧ್ಯಮಯ ಕಾರ್ಯಕ್ರಮಗಳಿಗೆ ವೇದಿಕೆಯಾಯಿತು. ಇಲ್ಲಿನ ಅಟಲ್ ಜೀ ಕನ್ನಡ ಭವನದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಕುಶಾಲನಗರ ಜೇಸಿ ವಲಯ ನಿರ್ದೇಶಕ ಪ್ರವೀಣ್ ಉದ್ಘಾಟಿಸಿ ದರು. ನಂತರ ಮಾತನಾಡಿ ಕಳೆದ ೧೦೫ ವರ್ಷಗಳಿಂದ ಪ್ರಪಂಚದಲ್ಲಿ ಜೇಸಿ ಸಂಸ್ಥೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಯುವಕರನ್ನು ದೇಶದ ಉತ್ತಮ ಪ್ರಜೆಯನ್ನಾಗಿಸುವ ನಿಟ್ಟಿನಲ್ಲಿ, ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತಿದೆ. ಕಳೆದ ಒಂದು ವಾರದಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡುತ್ತಿರುವ ಸ್ಥಳೀಯ ಜೇಸಿ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.
ನಿಕಟಪೂರ್ವ ಅಧ್ಯಕ್ಷೆ ಮಾಯಾ ಗಿರೀಶ್ ಮಾತನಾಡಿ, ಸೋಲು ಗೆಲುವು ಸ್ಪರ್ಧೆಯಲ್ಲಿ ಸಾಮಾನ್ಯವಾಗಿದೆ. ಯಾರೂ ಇದನ್ನು ಗಣನೆಗೆ ತೆಗೆದುಕೊಳ್ಳದೆ, ಸ್ಪರ್ಧಾತ್ಮಕ ಮನೋಭಾವದಿಂದ ಪಾಲ್ಗೊಳ್ಳಬೇಕು. ಒಂದು ವಾರದ ಕಾರ್ಯಕ್ರಮದಲ್ಲಿ ಸಾಕಷ್ಟು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸುವ ಮೂಲಕ ಹಲವಷ್ಟು ಪ್ರತಿಭೆಯನ್ನು ಹೊರತರಲು ಸಂಸ್ಥೆಯ ಮೂಲಕ ಪ್ರಯತ್ನಿಸಲಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಸಂಸ್ಥೆಯ ಅಧ್ಯಕ್ಷ ನೆಲ್ಸನ್ ಡಿಸೋಜ ವಹಿಸಿದ್ದರು.
ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ರಾಜೇಶ್, ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್, ನಿಯೋಜಿತ ಅಧ್ಯಕ್ಷೆ ಎಂ.ಎ. ರುಬೀನ, ಜೂನಿಯರ್ ಜೇಸಿ ಅಧ್ಯಕ್ಷೆ ಧನುಶ್ರೀ ಉಪಸ್ಥಿತರಿದ್ದರು. ಇದೇ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಗಮನ ಸೆಳೆದ ಶ್ವಾನ ಪ್ರದರ್ಶನ: ಜೇಸೀ ಸಂಸ್ಥೆಯ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನ ಗಮನ ಸೆಳೆಯಿತು. ೧೧ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಸ್. ಬದಾಮಿ ಅವರು ಕಾರ್ಯಕ್ರಮ ನಿರ್ವಹಿಸಿದರು.