ಸಿದ್ದಾಪುರ, ನ ೧೯: ಓ.ಡಿ.ಪಿ. ಸಂಸ್ಥೆ ಮೈಸೂರು ಹಾಗೂ ನಬಾರ್ಡ್ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ನೆಲ್ಯಹುದಿಕೇರಿ ಓಡಿಪಿ ಸಂಸ್ಥೆಯ ಕಚೇರಿಯಲ್ಲಿ ಕಿರು ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮವನ್ನು ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಎ.ಕೆ. ಹಕ್ಕೀಂ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿ ಬದುಕು ಸಾಧಿಸುವಂತಾದರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಪೇಪರ್ ಬ್ಯಾಗ್‌ಗಳನ್ನು ತಯಾರಿಸುವ ಮುಖಾಂತರ ಇದರ ಬಗ್ಗೆ ತರಬೇತಿಯನ್ನು ಪಡೆದು ಬ್ಯಾಗ್‌ಗಳನ್ನು ತಯಾರಿಸಬೇಕೆಂದು ಸಲಹೆ ನೀಡಿದರು.

ಓಡಿಪಿ ಸಂಸ್ಥೆಯ ಮೈಸೂರು ಸಂಯೋಜಕಿ ಆಗಿರುವ ಲಲಿತಾ ಅವರು ಮಾತನಾಡಿ ೩೦ ಶಿಬಿರಾರ್ಥಿಗಳಿಗೆ ಸ್ವಯಂ ಉದ್ಯೋಗದ ಬಗ್ಗೆ ೧ ತಿಂಗಳ ತರಬೇತಿಂiÀiನ್ನು ನೀಡಲಾಗುವುದು. ಆದ್ದರಿಂದ ಶಿಬಿರಾರ್ಥಿಗಳು ತಪ್ಪದೇ ಶಿಬಿರದಲ್ಲಿ ಪಾಲ್ಗೊಂಡು ಸ್ವಯಂ ಉದ್ಯೋಗಿಗಳಾಗಿ ಸ್ವಾವಲಂಬಿ ಬದುಕು ಕಟ್ಟಿಕೊಡಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಓಡಿಪಿ ಜಿಲ್ಲಾ ವಲಯ ಸಂಯೋಜಕಿ ಜಾಯ್ಸ್ ಮಿನೆಜಸ್, ಯೂನಿಟ್ ಸಂಯೋಜಕ ಚೇತನ್, ನೆಲ್ಲಿಹುದಿಕೇರಿ ಗ್ರಾ.ಪಂ. ಸದಸ್ಯೆ ಸಿಂದೂ, ಹೊಲಿಗೆ ತರಬೇತಿ ಶಿಕ್ಷಕಿ ರಾಧಾ ಇನ್ನಿತರರು ಹಾಜರಿದ್ದರು.