ಕುಶಾಲನಗರ, ನ. ೧೯: ಮೀಸಲು ಅರಣ್ಯದಿಂದ ಕೆರೆಗೆ ನೀರು ಕುಡಿಯಲು ಬಂದ ಕಾಡಾನೆಯೊಂದು ಅರಣ್ಯ ಇಲಾಖೆ ಅಳವಡಿಸಿದ್ದ ಕಾಂಕ್ರಿಟ್ ಬ್ಯಾರಿಕೇಡ್ ನಡುವೆ ಸಿಲುಕಿದ ಘಟನೆ ಕುಶಾಲನಗರ ಸಮೀಪದ ತೊಂಡೂರು ಬಳಿ ಶುಕ್ರವಾರ ರಾತ್ರಿ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ವಿಶೇಷ ಕಾರ್ಯಾಚರಣೆಯೊಂದಿಗೆ ಆನೆಯನ್ನು ರಕ್ಷಿಸಿ ಮತ್ತೆ ಕಾಡಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಶಾಲನಗರ ಸಮೀಪದ ಆನೆಕಾಡು ಮೀಸಲು ಅರಣ್ಯದ ಅಂಚಿನಲ್ಲಿ ಈ ಘಟನೆ ನಡೆದಿದ್ದು, ಸುಮಾರು ೨೦ ವರ್ಷ ಪ್ರಾಯದ ಹೆಣ್ಣಾನೆ ಸಮೀಪದ ಕೆರೆಗೆ ನೀರು ಕುಡಿಯಲು ಬರುವ ಧಾವಂತದಲ್ಲಿ ಕಾಂಕ್ರಿಟ್ ಬ್ಯಾರಿಕೇಡ್ನಲ್ಲಿ ನುಸುಳಿದ ಸಂದರ್ಭ ಕಂಬದ ನಡುವೆ ಆನೆಯ ಹೊಟ್ಟೆ ಭಾಗ ಸಿಲುಕಿಕೊಂಡಿದೆ. ಆನೆ ಘೀಳಿಡುತ್ತಿದ್ದ ಧ್ವನಿ ಕೇಳಿದ ಸ್ಥಳೀಯರು ತಕ್ಷಣ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಮ್ ತಂಡ ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆ ನಡೆಸಿ ಆನೆಯನ್ನು ಸುರಕ್ಷಿತವಾಗಿ ಹೊರ ತರಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ.
೨ ಮಣ್ಣು ತೆಗೆಯುವ ಯಂತ್ರ, ಹಿಟಾಚಿ, ಸಾಕಾನೆ ವಿಕ್ರಮ್ ಸಹಾಯದೊಂದಿಗೆ ಸುರಕ್ಷಿತವಾಗಿ ಆನೆಯನ್ನು ಹೊರ ತರಲು ತಡರಾತ್ರಿ ತನಕ ವಿಶೇಷ ಕಾರ್ಯಾಚರಣೆ ನಡೆಸಲಾಯಿತು ಎಂದು ವಲಯ ಅರಣ್ಯಾಧಿಕಾರಿ ಶಿವರಾಮ್ ವಿವರ ನೀಡಿದರು. ಆನೆಯ ಮೈಗೆ ಸೋಪ್ ವಾಟರ್, ಆಯಿಲ್ ಹಾಕುವ ಮೂಲಕ ಕಾಂಕ್ರಿಟ್ ಬ್ಯಾರಿಕೇಡ್ನಿಂದ ಹೊರ ತರುವ ಪ್ರಯತ್ನವನ್ನು ಮಾಡಲಾಯಿತೆಂದು ಅವರು ತಿಳಿಸಿದರು.
ಅಂತಿಮವಾಗಿ ಯಾವುದೇ ರೀತಿಯ ಗಾಯ ಉಂಟಾಗದೆ ಹೊರ ಬಂದ ಕಾಡಾನೆಯನ್ನು ಮತ್ತೆ ಕಾಡಿನತ್ತ ಸಾಗಿಸುವಲ್ಲಿ ಕಾರ್ಯಾಚರಣೆ ತಂಡ ತಡರಾತ್ರಿ ೧ ಗಂಟೆ ಸಂದರ್ಭ ಯಶಸ್ವಿಯಾಗಿದೆ. ಕಾಂಕ್ರಿಟ್ ಸರಪಳಿಯ ಕಂಬದ ನಡುವೆ ಸಿಲುಕಿಕೊಂಡಿದ್ದ ಆನೆಯನ್ನು ಹೊರ ತರುವ ಸಂದರ್ಭ ಇನ್ನಿತರ ೩ ಕಾಡಾನೆಗಳು ಸುತ್ತಮುತ್ತ ವ್ಯಾಪ್ತಿಯಲ್ಲಿ ಘೀಳಿಡುತ್ತಿದ್ದು, ಈ ಅಪಾಯದ ನಡುವೆ ಅಂದಾಜು ೪ ರಿಂದ ೫ ಗಂಟೆ ಕಾಲ ನಡೆದ ಸೇವ್ ಎಲಿಫೆಂಟ್ ಕಾರ್ಯಾಚರಣೆಯಲ್ಲಿ ಯಾವುದೇ ಅನಾಹುತ ಉಂಟಾಗಲಿಲ್ಲವಾದರೂ ಬಂಧಮುಕ್ತ ಆನೆ ಕಾರ್ಯಾಚರಣೆ ನಡೆಸಿದವರನ್ನೆ ಅಟ್ಟಿಸಿಕೊಂಡು ಬಂದ ಘಟನೆಯು ನಡೆಯಿತು ಎಂದು ಸಿಬ್ಬಂದಿಗಳು ತಮ್ಮ ರೋಚಕ ಅನುಭವವನ್ನು ಹಂಚಿಕೊAಡಿದ್ದಾರೆ. ಸ್ಥಳಕ್ಕೆ ಮಡಿಕೇರಿ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸೋಮವಾರಪೇಟೆ ಉಪ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್ ಭೇಟಿ ನೀಡಿದ್ದರು.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ದೇವಯ್ಯ, ಅನಿಲ್ ಡಿಸೋಜ, ರಂಜನ್, ಸುಬ್ರಾಯ, ಸಿಬ್ಬಂದಿಗಳು ಮತ್ತು ಆರ್ಆರ್ಟಿ ತಂಡದ ಸದಸ್ಯರು, ಸ್ಥಳೀಯ ಗ್ರಾಮಸ್ಥರು ಪಾಲ್ಗೊಂಡಿದ್ದರು. - ಚಂದ್ರಮೋಹನ್