ಗೋಣಿಕೊಪ್ಪಲು, ನ. ೨೦: ಕೊಡಗಿನ ಪ್ರತಿಷ್ಠಿತ ಪಂಚಾಯಿತಿಗಳಲ್ಲೊAದಾದ ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಗ್ರಾಮ ಪಂಚಾಯಿತಿಯ ಪ್ರಸ್ತುತ ಅಧ್ಯಕ್ಷ ಸ್ಥಾನದಲ್ಲಿರುವ ಚೈತ್ರ ಬಿ.ಚೇತನ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿ ಜಯಗಳಿಸಿ ಪಂಚಾಯಿತಿಯ ಸದಸ್ಯರಾಗಿರುವ ೬ನೇ ವಿಭಾಗದ ಮನ್ನಕ್ಕಮನೆ ಸೌಮ್ಯ ಬಾಲು ಹಾಗೂ ೨ನೇ ವಿಭಾಗದಿಂದ ಜಯಗಳಿಸಿ ಸದಸ್ಯರಾಗಿರುವ ಜಿ.ಕೆ.ಗೀತಾ ನಡುವೆ ಪೈಪೋಟಿ ಎದುರಾಗಿದೆ.

ಬಿಜೆಪಿ ಪಕ್ಷದ ಪ್ರಮುಖರು ಮುಂದಿನ ಅಧ್ಯಕ್ಷಗಾದಿಗೆ ಪೈಪೋಟಿ ನೀಡಿರುವ ಸದಸ್ಯರ ಹಾಗೂ ಉಳಿದ ಸದಸ್ಯರ ಆಹವಾಲುಗಳನ್ನು ಸ್ವೀಕರಿಸಿದ್ದು ಪಕ್ಷವು ಉತ್ತಮ ನಿರ್ಧಾರ ಪ್ರಕಟಿಸುವವರೆಗೂ ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಸ್ಪಷ್ಟ ಸೂಚನೆ ನೀಡಿದೆ.

೨೧ ಸಂಖ್ಯೆ ಬಲವಿದ್ದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕಳೆದ ೧ ತಿಂಗಳ ಹಿಂದೆ ಹರಿಶ್ಚಂದ್ರಪುರ ವಾರ್ಡಿನ ಓರ್ವ ಸದಸ್ಯೆ ಮೃತಪಟ್ಟ ಹಿನ್ನಲೆಯಲ್ಲಿ ಒಟ್ಟು ಸದಸ್ಯರ ಸಂಖ್ಯಾ ಬಲವು ೨೦ಕ್ಕೆ ಇಳಿದಿದೆ. ಮೊದಲ ಅವಧಿಯ ೨೦೨೧ ಆಗಸ್ಟ್ ೪ ರಂದು ಬಿಸಿಎಂಎ ಮಹಿಳಾ ಮೀಸಲಾತಿಯಲ್ಲಿ ಚೈತ್ರ ಬಿ.ಚೇತನ್ ಅವರನ್ನು ಅಧ್ಯಕ್ಷಗಾದಿಗೆ ಪಕ್ಷದ ವರಿಷ್ಠರು ಅವಕಾಶ ಕಲ್ಪಿಸಿದ್ದರು. ಈ ವೇಳೆ ಇದೇ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದ ೬ನೇ ವಾರ್ಡಿನ ಸದಸ್ಯರಾದ ಸೌಮ್ಯ ಬಾಲು ತಮಗೊಂದು ಅವಕಾಶ ಬೇಕೆಂದು ಪಕ್ಷದ ವರಿಷ್ಟರ ಮುಂದೆ ತಮ್ಮ ಬೇಡಿಕೆ ಇಟ್ಟಿದ್ದರು. ಈ ವೇಳೆ ವರಿಷ್ಠರು ಮುಂದಿನ ಅವಧಿಯಲ್ಲಿ ಪರಿಗಣಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ.

ಇದೀಗ ಅಧ್ಯಕ್ಷರಾಗಿದ್ದ ಚೈತ್ರ.ಬಿ.ಚೇತನ್ ಮಡಿಕೇರಿ ಉಪವಿಭಾಗಾಧಿಕಾರಿಯವರಿಗೆ ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ಪಕ್ಷದ ವರಿಷ್ಠರ ಸೂಚನೆಯಂತೆ ಕಳೆದ ೨ ದಿನಗಳ ಹಿಂದೆ ನೀಡಿದ್ದಾರೆ. ರಾಜೀನಾಮೆ ಪತ್ರ ನೀಡಿ ೧೫ ದಿನದ ನಂತರ ರಾಜೀನಾಮೆ ಪತ್ರವು ಅಂಗೀಕಾರವಾಗುವ ನಿಯಮವಿರುವುದರಿಂದ ಪ್ರಸ್ತುತ ಚೈತ್ರ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ. ಪಕ್ಷದ ಪ್ರಮುಖರು ಮತ್ತು ಚುನಾಯಿತ ಪ್ರತಿನಿಧಿಗಳ ಒಡಂಬಡಿಕೆಯAತೆ ಕಳೆದ ೧೫ ತಿಂಗಳಿನಿAದ ಅಧ್ಯಕ್ಷರಾಗಿ ಆಡಳಿತ ನಡೆಸಿದ ಚೈತ್ರ ಬಿ. ಚೇತನ್ ಅವರ ಆಡಳಿತ ಅವಧಿ ನ.೪ಕ್ಕೆ ಪೂರ್ಣಗೊಂಡಿತ್ತು.ಆದರೆ ಚೈತ್ರರವರು ರಾಜೀನಾಮೆಗೆ ೧ ವಾರಗಳ ಸಮಯ ಬೇಕೆಂದು ವರಿಷ್ಠರ ಮುಂದೆ ಅಹವಾಲು ಸಲ್ಲಿಸಿದ್ದರು.ನೀಡಿದ ಮಾತಿನಂತೆ ವಾರದ ನಂತರ ಚೈತ್ರರವರು ತಮ್ಮ ಅಧ್ಯಕ್ಷಗಾದಿಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿರುವ ಸೌಮ್ಯ ಬಾಲು, ಜಿ.ಕೆ. ಗೀತಾ ಹಾಗೂ ೭ನೇ ವಾರ್ಡಿನಿಂದ ಜಯಗಳಿಸಿದ್ದ ಪುಷ್ಪ ಮನೋಜ್ ಇವರ ಮಧ್ಯೆ ಪೈಪೋಟಿ ಎದುರಾಗಿದ್ದರೂ ಸೌಮ್ಯ ಹಾಗೂ ಗೀತಾಳ ನಡುವೆ ಪೈಪೋಟಿ ಅಧಿಕವಾಗಿ ಕಂಡು ಬಂದಿದೆ. ಆಕಾಂಕ್ಷಿಗಳು ಮಂಡಲ ಅಧ್ಯಕ್ಷರು, ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದು ಅವಕಾಶ ನೀಡಬೇಕೆಂದು ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಆದರೆ ಪಕ್ಷದ ವರಿಷ್ಠರು ತಮ್ಮ ಗುಟ್ಟನ್ನು ಯಾವ ಸದಸ್ಯರಿಗೂ ಬಿಟ್ಟುಕೊಟ್ಟಿಲ್ಲ.

-ಹೆಚ್.ಕೆ. ಜಗದೀಶ್