(ನಿನ್ನೆಯ ಸಂಚಿಕೆಯಿAದ) ವೃಶ್ಚಿಕ ಮಾಸದ ವಿಶಾಖ ನಕ್ಷತ್ರದ ಅಮಾವಾಸ್ಯೆಯ ದಿವಸ ಬೆಳಿಗ್ಗೆ ೧೦ ಗಂಟೆಗೆ ದೇವಸ್ಥಾನದ ಪತ್ತಾಪರೆಯ ಹಜಾರದಲ್ಲಿ, ಊರಿನವರು, ನಾಡಿನ ಊರು ತಕ್ಕರು, ಭಕ್ತಾದಿಗಳು ಸೇರಿದಾಗ ಅಮ್ಮಂಗೇರಿ ಕಣಿಯ ಜ್ಯೋತಿಷ್ಯರು ವಿಧಿಯುಕ್ತವಾಗಿ ರಾಶಿಮಂಡಲ ಬರೆದು ಊರವರ ಅನುಮತಿ ಪಡೆದು ಪುತ್ತರಿ ಹಬ್ಬಕ್ಕೆ (ಕಲಾಡ್ಚ ಹಬ್ಬ) ಕೃತ್ತಿಕಾ ನಕ್ಷತ್ರ ಕೂಡಿ ಬರುವ ದಿವಸವನ್ನು ಹಾಗೂ ಪುತ್ತರಿ ಆಚರಣೆಗೆ ರೋಹಿಣಿ ನಕ್ಷತ್ರವು ಒದಗಿ ಬರುವ ದಿನವನ್ನು, ಹಾಗೆಯೇ ಶ್ರೀ ಇಗ್ಗುತ್ತಪ್ಪ ದೇವರಿಗೆ ರಾತ್ರಿ ನೆರೆಕಟ್ಟುವುದಕ್ಕೆ, ಕದಿರು ತೆಗೆಯುವುದಕ್ಕೆ (ದೇವಪೊಳ್ದು) ಹಾಗೂ ರಾತ್ರಿ ಊಟಕ್ಕೆ ಎಂಬುದಾಗಿ ಬೇರೆ-ಬೇರೆಯಾಗಿ ಮುಹೂರ್ತ ಕಂಡುಹಿಡಿದು ಅಮ್ಮಂಗೇರಿ ಜ್ಯೋತಿಷ್ಯರು ರಾಶಿ ಪ್ರಕರಣದ ಫಲಿತಾಂಶ ಘೋಷಿಸುತ್ತಾರೆ. ಹಾಗೆಯೇ ಇಗ್ಗುತ್ತಪ್ಪ ದೇವರ ಪುತ್ತರಿಯ ಕದಿರು ತೆಗೆದು, ಹಲವು ನಿಮಿಷಗಳ ನಂತರ ಕೊಡಗಿನ ಸಮಸ್ತ ಜನರಿಗೆ ಕ್ರಮವಾಗಿ ನೆರೆಕಟ್ಟುವುದು, ಕದಿರು ತೆಗೆಯುವುದು, ಭೋಜನಕ್ಕೆ-ಹೀಗೆ ಮುಹೂರ್ತ ಕಂಡುಹಿಡಿದು ಘೋಷಿಸುವರು. ಇದನ್ನೇ ‘ನಾಡಪೊಳ್ದ್’ ಎನ್ನುತ್ತಾರೆ. ಈ ಜ್ಯೋತಿಷ್ಯ ಶಾಸ್ತç ವಿಚಾರ ನಿರ್ಣಯಕ್ಕೂ ಮೊದಲು ಕಣಿಯರು ಮಂಡಲ ಬರೆದು ತಮ್ಮ ಕುಲಕಸುಬಿನಂತೆ ಕವುಡಿ ಹಾಕಿದರೂ ಪುತ್ತರಿಯ ಕದಿರು ತೆಗೆಯುವ ಶುಭಮುಹೂರ್ತದ ಘಳಿಗೆ ನಿರ್ಧರಿಸಲು ‘ಉದ್ಯಾವರ ಪಂಚಾAಗ’ವೇ ಆಧಾರ. ಈ ವಿಷಯದಲ್ಲಿ ಜನರ ಏನೇ ಪ್ರಶ್ನೆಗಳಿದ್ದರೂ ಪತ್ತೇಪರೆಯ ಪಡಸಾಲೆಯಲ್ಲಿ ಉತ್ತರ ನೀಡಲಾಗುತ್ತದೆ. ಪರಂಪರಾಗತವಾಗಿ ಬಂದAತಹ ಈ ಮುಹೂರ್ತ ನಿರ್ಧರಿಸುವ ಸಂದರ್ಭಕ್ಕೆ ‘ಪುತ್ತರಿ’ ಕದಿರು ತೆಗೆಯಲು ಹುಣ್ಣಿಮೆಯ ದಿನವೇ ಆಗಿಬರಬೇಕು ಎಂದೇನಿಲ್ಲ. ಹಿಂದೆ ಹಲವಾರು ವರ್ಷಗಳು ಹುಣ್ಣಿಮೆಯಂದೇ ‘ಪುತ್ತರಿ’ಯಾದ ನಿದರ್ಶನವಿದೆ. ಆದರೆ, ಆ ದಿನಗಳಲ್ಲೆಲ್ಲಾ ರೋಹಿಣಿ ನಕ್ಷತ್ರ ರಾತ್ರಿ ವೇಳೆ ಕದಿರು ತೆಗೆಯುವ ಸಂದರ್ಭದಲ್ಲಿ ಇರುತ್ತಿತ್ತೆಂಬುದು ಗಮನಾರ್ಹ. ಹಾಗಾಗಿ ಇಲ್ಲಿ ಕದಿರು ಕುಯ್ಯುವ ಶುಭ ಸಂದರ್ಭಕ್ಕೆ ‘ರೋಹಿಣಿ ನಕ್ಷತ್ರ’ದ ಆದಿ ಪಾದವು ಕೂಡಿ ಬರಬೇಕೆಂಬ ನಿಯಮವಿರುವುದರಿಂದ ಹುಣ್ಣಿಮೆ ಆದರೂ ಸರಿ, ಹುಣ್ಣಿಮೆಯ ರಾತ್ರಿ ಅಲ್ಲದಿದ್ದರೂ ಸರಿ; ಪುತ್ತರಿಯ ಕದಿರು ಕೊಯ್ಯುವಲ್ಲಿ ‘ರೋಹಿಣಿ ನಕ್ಷತ್ರ’ ಇರಬೇಕೆಂಬ ನಿಯಮ ಅನಾದಿ ಕಾಲದಿಂದಲೂ ನಡೆದು ಬಂದುದಾಗಿದೆ. ಇದಕ್ಕೆ ಪೂರಕವಾಗಿ ಶ್ರೀ ಪೇರಿಯಂಡ ಚಂಗಪ್ಪ ನವರು ತಮ್ಮ ‘ಅಂದೋಳತ್’ ಪುಸ್ತಕದಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾರೆ.

ಇಂದಿನ ಆಧುನಿಕ ಯುಗದಲ್ಲಿ ‘ರೋಹಿಣಿ ನಕ್ಷತ್ರ’ದ ಸಮಯ ಕಂಡುಹಿಡಿಯಲು ಪಂಚಾAಗ ಆಧಾರಿತ ಹಲವು ವಿಧಗಳಿರಬಹುದು, ಹೆಚ್ಚಿನ ಜನರು ಈ ನಕ್ಷತ್ರದ ಸಮಯ, ಶುಭಘಳಿಗೆಯ ಬಗ್ಗೆ ಮೊದಲೇ ತಿಳಿದಿರುತ್ತರಾದರೂ (ಶ್ರೀಮಾನ್ ಚೆರುಮಂದAಡ ನಾಣಯ್ಯ, ನಿವೃತ್ತ ಆರೋಗ್ಯಾಧಿಕಾರಿ, ಕಿರುಂದಾಡು ಗ್ರಾಮ, ಸದ್ಯ ವೀರಾಜಪೇಟೆಯಲ್ಲಿ ವಾಸ, ಇವರ ಬಳಿ ಸುಮಾರು ೨೦ ವರ್ಷಗಳ ಹಿಂದಿನಿAದಲೂ ಪುತ್ತರಿಯ ಘಳಿಗೆ ರೋಹಿಣಿ ನಕ್ಷತ್ರದ ಅರಿವು ಇವುಗಳ ಮಾಹಿತಿ, ಹಬ್ಬ ಜರುಗಿದ ದಿವಸಗಳ ಬಗ್ಗೆ ಮಾಹಿತಿ ಇಟ್ಟುಕೊಂಡಿದ್ದಾರೆ.) ಯಾರೂ ‘ಪುತ್ತರಿ ಕುರಿಪ’ ಸಂದರ್ಭಕ್ಕೆ ಮೊದಲು ಇದನ್ನು ಹೇಳಬಯಸುವುದಿಲ್ಲ.

ಓಣಂ ಹಬ್ಬ ಕಳೆದು ಸರಿಸುಮಾರು ೯೦ ದಿವಸಗಳಲ್ಲಿ ಪುತ್ತರಿ ಸಂಭವಿಸುತ್ತಾದರೂ, ಇಲ್ಲಿ ರೋಹಿಣಿ ನಕ್ಷತ್ರದ ಸಮಯ ‘ಪುತ್ತರಿ’ಯ ದಿನ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆಯೆಂಬುದು ಗಮನಾರ್ಹ.

ಹೀಗೆ ಪಾಡಿಶ್ರೀ ಇಗ್ಗುತ್ತಪ್ಪ ದೇವರ ಸನ್ನಿಧಿಯಲ್ಲಿ ಪುತ್ತರಿ ಹಬ್ಬದ ‘ಮುಹೂರ್ತ ಪಟ್ಟಿ’ ಕಟ್ಟುವುದನ್ನು ‘ದೇವಕಟ್ಟ್ ಕುರಿಪ’ ಎಂದು ಹೇಳುತ್ತಾರೆ. ಅಂದರೆ ಬಿರ್ಚ್ಯಾರ್ ಕಲ್ಯಾಡ್ಚ ಹಬ್ಬ ದೇವರ ಕಟ್ಟು ಬೀಳುವುದನ್ನು (ದೇಶಕಟ್ಟ್) ಶಾಸ್ತç ಪ್ರಕಾರವಾಗಿ ಘೋಷಿಸುವುದು ಎಂದು ಅರ್ಥ. ಹೀಗೆ ದೇವರ ಬಿರ್ಚ್ಯಾರ್ ಕಲ್ಯಾಡ್ಚ ಹಬ್ಬಕ್ಕೆ ಕೃತ್ತಿಕಾ ನಕ್ಷತ್ರವು ಕೂಡಿ ಬರುವ ದಿನವನ್ನು ಹಾಗೆಯೇ ಪುತ್ತರಿ ಆಚರಣೆಗೆ ರೋಹಿಣಿ ನಕ್ಷತ್ರ ಒದಗಿ ಬರುವ ದಿನವನ್ನು (ಹಲವು ಸಂದರ್ಭಗಳಲ್ಲಿ ಪುತ್ತರಿ ಹಾಗೂ ಶ್ರೀ ದೇವರು ಬಿರ್ಚ್ಯಾರ್ ಕಲಾಡ್ಚ ಒಂದೇ ದಿನ ಸಂಭವಿಸಿದುದೂ ಉಂಟು) ಹಾಗೆಯೇ ಶ್ರೀ ಇಗ್ಗುತ್ತಪ್ಪ ದೇವರ ಕದಿರು ತೆಗೆಯುವ ‘ದೇವ ಪೊಳ್ದ್’ನ ಸಮಯ ಹಾಗೂ ನಾಡಿನವರ ಕದಿರು ತೆಗೆಯುವ ‘ನಾಡ್‌ಪೊಳ್ದ್’ನ ಸಮಯದ ಉಲ್ಲೇಖವಿರುವ ‘ಮುಹೂರ್ತ ಪಟ್ಟಿ’ಯನ್ನು ಆದಿಸ್ಥಾನ ಮಲ್ಮದಲ್ಲಿ ‘ದೇಶಕಟ್ಟು’ ಬಿಗಿದ ನಂತರವಷ್ಟೇ ನಾಡಿನೆಲ್ಲೆಡೆ, ಪತ್ರಿಕೆಗಳಿಗೆ ಪ್ರಚಾರ ಮಾಡುವ ನಿಯಮವಿತ್ತು. ಹಾಗೆಯೇ ಕಣಿಯ, ಜ್ಯೋತಿಷ್ಯರು, ಮಲ್ಮದಲ್ಲಿ ವಿಧಿಪ್ರಕಾರವಾಗಿ ‘ದೇವಕಟ್ಟು’ ಕಳೆದ ನಂತರ ಮುಹೂರ್ತಪಟ್ಟಿಯನ್ನು ನಾಡಿನೆಲ್ಲೆಡೆ ಪ್ರಚಾರ ಮಾಡಲು ಹೋಗುವ ಮೊದಲು, ಪರದಂಡ ಐನ್‌ಮನೆಗೆ ತೆರಳಿ, ದೇವತಕ್ಕರಿಗೆ, ಮುಖ್ಯಸ್ಥರಿಗೆ ತಿಳಿಸುವ ಪರಿಪಾಠ ಇತ್ತು. ನಂತರ ನಾಪೋಕ್ಲಿನ ಶ್ರೀ ಮಕ್ಕಿ ಶಾಸ್ತಾವು ದೇವಸ್ಥಾನ (ಬೇತುಗ್ರಾಮ)ಕ್ಕೆ ತೆರಳಿ ಮುಹೂರ್ತ ಪಟ್ಟಿಯನ್ನು ಶ್ರೀ ದೇವರ ನಡೆಯಲ್ಲಿ ಓದಿ ಹೇಳುವ ಪದ್ಧತಿ ಇತ್ತು.

ಹೀಗೆಯೇ ಈ ವರ್ಷದ ೨೩-೧೧-೨೦೨೨ರ ಬುಧವಾರದ ಅಮಾವಾಸ್ಯೆ ಯಿಂದ ‘ದೇವಕಟ್ಟು, ದೇಶಕಟ್ಟು ಬೀಳಲಿದೆ. ಈ ಸಂದರ್ಭದಲ್ಲಿ ಮತ್ತೊಮ್ಮೆ ಈ ಕಟ್ಟಿನ ಮಹತ್ವದ ಬಗ್ಗೆ ಹೇಳಲೇಬೇಕು. ಪುತ್ತರಿಯ ಮುಹೂರ್ತ ಪಟ್ಟಿ ಪಾಡಿ ದೇವಸ್ಥಾನದಲ್ಲಿ ಸಿದ್ಧಗೊಂಡ ನಂತರ ಅದೇ ದಿವಸ ನಿತ್ಯಪೂಜೆ, ಭೋಜನ ಕಳೆದು ಆದಿಸ್ಥಾನ ಮಲ್ಮ ಬೆಟ್ಟಕ್ಕೆ ದೇವತಕ್ಕರಾದ ಪರದಂಡ ಕುಟುಂಬಸ್ಥರು, ಭಕ್ತಾದಿಗಳು, ಅರ್ಚಕರು, ಮುಕ್ಕಾಟಿ, ಮಾರಾಯರು ಎಲ್ಲಾ ಸೇರಿ ತೆರಳುವರು. ಅದೇ ರೀತಿ ನೆಲಜಿ, ಪೇರೂರು ಗ್ರಾಮದಿಂದ ಕೂಡ ತಕ್ಕಮುಖ್ಯಸ್ಥರು ‘ಪಾಲ್ ಬೈಯಾಡ್’ನೊಂದಿಗೆ ಆಗಮಿಸುವರು. ಮೂರೂ ದಿಕ್ಕಿನಿಂದ, ಊರುಗಳಿಂದ ಆಗಮಿಸಿದ ಪಾಲ್ ಬೈಯಾಡ್ ಅಂದರೆ (ಪಾಡಿ, ನೆಲಜಿ, ಪೇರೂರು)ನಿಂದ ಪಾಯಸಾನ್ನವು ತಯಾರಾಗುತ್ತಿದ್ದಂತೆ ಅರ್ಚಕರು ಬಿರ್ಚ್ಯಾರು ಕಲಾಡ್ಚ ಹಬ್ಬದ ದೇವಕಟ್ಟು ಹಾಕಲು ದೇವತಕ್ಕರಾದ ಪರದಂಡ ಕುಟುಂಬವನ್ನು ಕೇಳಿದಾಗ, ಕುಟುಂಬದ ಹಿರಿಯರು ‘‘ಓ ಈಶ್ವರ ಇಗ್ಗುತ್ತಪ್ಪ, ನಾಲ್ಕುನಾಡಿನ ಒಡೆಯನೆ, ದೇಶದೊಡೆಯನೆ ಇಂದಿನಿAದ ನಿನ್ನ ಬಿರ್ಚ್ಯಾರ್ ಕಲಾಡ್ಚ ಹಬ್ಬ ಜರುಗುವ ೧೫ ದಿವಸಗಳವರೆಗೆ ಯಾರೂ ನೆಟ್ಟ ಭತ್ತದ ಬೆಳೆ ಕೊಯ್ಯಬಾರದು, ಮದುವೆ ತಿಥಿ ಕರ್ಮಾಂತರಗಳನ್ನು ನಡೆಸಬಾರದು, ಗುಂಡಿನ ಶಬ್ದ ಕೇಳಬಾರದು, ಎಲ್ಲರೂ ಶುದ್ಧ ಮುದ್ರಿಕೆಯಿಂದ ಇರಬೇಕು. ತನ್ನ ಗ್ರಾಮ ಬಿಟ್ಟು ಪರ ಊರಿಗೆ ವಿಹಾರ-ವಿನೋದಕ್ಕಾಗಿ ಹೋಗಬಾರದು. ಇದು ಶ್ರೀ ಇಗ್ಗುತ್ತಪ್ಪ ದೇವರ ಕಟ್ಟಪ್ಪಣೆ. ಇಷ್ಟ ಬಂದAತೆ ಇದಕ್ಕೆ ವಿರುದ್ಧವಾಗಿ ವರ್ತಿಸಿದರೆ ಅಂತಹವರು ಶ್ರೀ ಇಗ್ಗುತ್ತಪ್ಪ ದೇವರ ಕೋಪಕ್ಕೆ ಒಳಗಾಗುವಿರಿ. ಅಂತಹವರ ಮನೆ-ಮನೆತನ ಮಣ್ಣುಪಾಲಾಗಿ ಹೋದೀತು ಎಚ್ಚರ. ಇದಕ್ಕೆ ವಿರುದ್ಧವಾಗಿ ಇಡೀ ಕೊಡಗು ದೇಶದ ಜನರು ವರ್ತಿಸಬೇಡಿ’’ ಎಂದು ಪ್ರಾರ್ಥಿಸಿದ ತಕ್ಷಣ ದೇವಕಟ್ಟು, ದೇಶಕಟ್ಟು ಜಾರಿಯಾಗುವುದು, ಪಾಡಿ ನಾಲ್ಕುನಾಡಿನಲ್ಲಿ ಜನರಿಗೆ ಇದರ ಬಗ್ಗೆ ಅರಿವಿದೆ. ಹಾಗಾಗಿ ಪುತ್ತರಿಹಬ್ಬ ಕಳೆಯುವವರೆಗೆ ಯಾರೂ ಮದುವೆಯಂತಹ ಆಡಂಬರದ ಕಾರ್ಯಕ್ರಮ ಆಚರಿಸುವುದಿಲ್ಲ, ಕೊಡಗಿನೆಲ್ಲೆಡೆ ಜನರು ಇದರ ಪ್ರಾಮುಖ್ಯತೆಯನ್ನು ಅರಿಯಬೇಕಿದೆ. ಹಾಗಾದಾಗ ಮಾತ್ರ ಪುತ್ತರಿಯ ದಿನ ಶುಭ ಮುಹೂರ್ತದಲ್ಲಿ ಮನೆಯ ಒಳಗೆ ತರುವ ‘ಭತ್ತದ ಕದಿರಿಗೆ’ ಧಾನ್ಯಲಕ್ಷಿö್ಮಗೆ ಬೆಲೆಕೊಟ್ಟಂತಾಗುತ್ತದೆ. ಆಚರಣೆಗೆ ಒಂದು ಅರ್ಥ ಬರುತ್ತದೆ.

ಈ ದೇಶಕಟ್ಟಿನ ನಂಬಿಕೆ, ಪುತ್ತರಿಯ ಕದಿರು ತೆಗೆಯಲು ರೋಹಿಣಿ ನಕ್ಷತ್ರದ ಆದಿ ಪಾದವೇ ಕೂಡಿ ಬರಬೇಕೆಂಬ ನಿಯಮ ಇವುಗಳೆಲ್ಲವೂ ಕೊಡವ ಭಾಷೆಯಲ್ಲಿ ಪ್ರಚಲಿತವಿರುವ ‘ನಂಬ್‌ನವAಗ್ ಇಂಬ್’ (ನಂಬಿದವರಿಗೆ ದೇವರ ಬಲ) ಎಂಬ ಪ್ರಾಚೀನ ನಂಬಿಕೆಯ ಮೇಲೆ ಆಧಾರಿತವಾಗಿದೆ. ಎತ್ತಿನಗಾಡಿ ಮುಂದು ಹೋಗುತ್ತಿರುವಾಗ ಏರು ರಸ್ತೆಯಲ್ಲಿ ಸಾಗುವಾಗ ಅದು ಹಿಂದಕ್ಕೆ ಬಾರದಂತೆ ಚಕ್ರಗಳ ಹಿಂಭಾಗ ಮರದ ‘ಬಿರಿ’ಯೊಂದನ್ನು ಬಿಗಿಯಲಾಗುತ್ತಿತ್ತು. ಇಲ್ಲಿಯೂ ಸಹ ನಮ್ಮ ನಂಬಿಕೆಗಳನ್ನು ‘ಬಿರಿ’ಗೆ ಹೋಲಿಸಬಹುದು.

ಪಂಚಾAಗ ನಕ್ಷತ್ರದ ಸಮಯ, ಕಣಿಯರ ಅಗತ್ಯ ಬೇಡವೆನ್ನುವವರು ಒಂದು ಮಾತು ನೆನಪಿಟ್ಟುಕೊಳ್ಳಬೇಕಿದೆ. ಕೊಡವ ಭಾಷಿಕರಲ್ಲಿ ಮದುವೆಯ ಸಂದರ್ಭದಲ್ಲಿ ಹಸೆಮಣೆ ಏರಲು ರಾಹುಕಾಲ ತಪ್ಪಿಸಲಾಗುತ್ತದೆ, ಹಾಗೆಯೇ ಶವಸಂಸ್ಕಾರದ ಸಮಯದಲ್ಲಿ ಮನೆಯಿಂದ ಶವವನ್ನು ಸ್ಮಶಾನದೆಡೆಗೆ ಹೊತ್ತುಕೊಂಡು ಹೋಗುವ ಮುನ್ನ ಕೂಡ ರಾಹುಕಾಲ ತಪ್ಪಿಸಲಾಗುತ್ತದೆ. ಹೀಗಾಗಿ ಶುಭಮುಹೂರ್ತ, ಶುಭಘಳಿಗೆ, ಶುಭನಕ್ಷತ್ರ ಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ. ಹೀಗಾಗಿಯೇ ಹುಣ್ಣಿಮೆಯ ದಿವಸವೇ ‘ಪುತ್ತರಿ’ ನಡೆಯಬೇಕೆನ್ನುವ ಹಠ, ನಕ್ಷತ್ರದ ಸಮಯ ಇಂತಹವುಗಳ ಅಗತ್ಯವಿಲ್ಲವೆನ್ನುವ ವಾದ ಇಗ್ಗುತ್ತಪ್ಪ ದೇವರ ಪೌರಾಣಿಕ ಹಿನ್ನೆಲೆಗೆ ತೊಂದರೆ ಮಾಡಿದಂತಾಗುತ್ತದೆ. ಅಲ್ಲದೆ, ಕೊಡವ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಕಣಿಯರ ಜ್ಯೋತಿಷ್ಯ, ಅತ್ಯಂತ ಕ್ಷೀಣಿಸುತ್ತಿರುವ ಜನಸಂಖ್ಯೆ ಒಂದೆಡೆಯಾದರೆ ಪುತ್ತರಿ ಹಾಡಿನಲ್ಲಿ ಹೇಳಿರುವಂತೆ ಕುಂಬಾರನು ಮಣ್ಣಿನ ಮಡಕೆಯನ್ನು ತಯಾರಿಸುತ್ತಾನೆ. ಮೇದ ಜನಾಂಗದವರು ಓಟೆಯ ಪಚ್ಚೆಯನ್ನು ಮನೆ-ಮನೆಗೆ ತಲಪಿಸುತ್ತಾರೆ. ಕೆಂಬಟ್ಟಿ ಜನಾಂಗದವರು ಓಲೆ ಗರಿಯ ಹೊಸ ಚಾಪೆಯನ್ನು ತಲುಪಿಸುತ್ತಾರೆ. ಕಬ್ಬಿಣದ ಕೆಲಸದಾತ ಬೆಳೆಕುಯ್ಯುವ ಕತ್ತಿಯನ್ನು ತಂದಿರುತ್ತಾನೆ. ಮದುವೆ ಸಂದರ್ಭ ‘ಮಡಿವಾಳ’ನಿಗೆ ಬಟ್ಟೆ ಶುಚಿಗೊಳಿಸಲು, ಸವಿತಾ ಸಮಾಜದ ವ್ಯಕ್ತಿಗೆ ಕ್ಷೌರ ಕಾರ್ಯಕ್ಕಾಗಿ (ಮದುವೆ ಸಂದರ್ಭ) ಕೆಂಬಟ್ಟಿ ಜನಾಂಗದವರು ಮದುವೆ ಮತ್ತು ತಿಥಿ ಸಂದರ್ಭ ಕೊಂಬ್, ಕೊಟ್ಟ್, ವಾಲಗದ ಸೇವೆ ಇದೆ. ಇದೆಲ್ಲವೂ ಪುಟಕ್ಕಿಟ್ಟ ಚಿನ್ನದಂತಹ ಕೊಡವಾಮೆಯ ಸಂಸ್ಕೃತಿಗೆ ತಮ್ಮ ಅಪಾರ ಕೊಡುಗೆಯಾಗಿದೆ.

ಹೀಗೆಯೇ ಶ್ರೀಮಂತಿಕೆ ಸಂಸ್ಕೃತಿಯ ಬೀಡಾಗಿರುವ ಶ್ರೀ ಇಗ್ಗುತ್ತಪ್ಪನ ವೈಭವವು ಮಲ್ಮದಲ್ಲಿ ಬಿರ್ಚ್ಯಾರ್ ಕಲಾಡ್ಚ ಹಬ್ಬದ ದಿನ ದೇವತಕ್ಕರ ಮನೆಯಿಂದ, ನೆಲಜಿ ಪೇರೂರಿನ ಕಡೆಯಿಂದ ಬರುವ ‘ಜೋಡೆತ್ತುಗಳ ಎತ್ತುಪೋರಾಟ’ ಒಪ್ಪಿಸಿ, ಅಕ್ಕಿಗುಡ್ಡೆಯನ್ನು ಮೂರು ಗ್ರಾಮದ ತಕ್ಕರು ಇಬ್ಭಾಗ ಮಾಡಿ ಎಳೆದಾಗ ಸಾಂಕೇತಿಕವಾಗಿ ದೇವಕಟ್ಟು, ದೇಶಕಟ್ಟು ದೇವತಕ್ಕರ ‘ತಪ್ಪೊಡಕ’ ಮಾತಿನೊಂದಿಗೆ, ಪ್ರಾರ್ಥನೆಯೊಂದಿಗೆ ಕೊನೆಗೊಳ್ಳುವುದು. ಇದಾದ ಕೂಡಲೇ ಪೂಜಾ ಕೈಂಕರ್ಯ, ಬನದ ಪ್ರದಕ್ಷಿಣೆ ಮುಗಿಸಿ ಚಂಡೆವಾದ್ಯದೊAದಿಗೆ ದೇವರ ಉತ್ಸವಮೂರ್ತಿ ಯನ್ನು ಹೊತ್ತ ಅರ್ಚಕರ ವೃಂದ ಪಾಡಿ ದೇವಸ್ಥಾನವನ್ನು ಮುಸ್ಸಂಜೆ ಹೊತ್ತಿಗೆ ತಲುಪಿದಾಗಲೇ ಅರ್ಚಕ ವೃಂದದವರೊಬ್ಬರು ಉತ್ಸವ ಮೂರ್ತಿ ಯನ್ನು ಹೊತ್ತು ದೇವಾಲಯದ ಸುತ್ತ ನಾಟ್ಯಬಲಿ, ನಾಟ್ಯಪ್ರದರ್ಶನ ಏರ್ಪಡುವುದು. ಎಲ್ಲಾ ಸುತ್ತುಗಳು ಕೊನೆಗೊಂಡು ಹಲಸಿನ ಮರದ ಕೆಳಗೆ ದೇವಾಲಯದ ಆಗ್ನೇಯ ಭಾಗದಲ್ಲಿ ದೇವತಕ್ಕರಾದ ಪರದಂಡ ಕುಟುಂಬಸ್ತರು ನಾಡಿನ ಸರ್ವಜನಾಂಗದ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸುವರು. ಈ ಸಂದರ್ಭ ಉತ್ಸವಮೂರ್ತಿಯ ಸಹನ್ಮುಖ ಮುಖಚರ್ಯೆ, ಅದನ್ನು ಹೊತ್ತ ತಂತ್ರವರ್ಯನ ಮುಖದ ನಿರ್ಲಿಪ್ತತೆ, ಕಣ್ಣುಗಳಲ್ಲಿನ ಆರ್ದ್ರತೆ, ಕೈಮುಗಿದು ಕುಳಿತ ತುಲಾಭಾರಗೈದವರ ಮನೋಭಾವ ನೆರೆದವರನ್ನೆಲ್ಲಾ ಹರಸಿ ಒಮ್ಮೆಗೆ ದೇವಾಲಯದ ಒಳಗೆ ದೇವರ ಬಿಂಬ ಕೈಯಲ್ಲಿ ಹಿಡಿದು ನುಗ್ಗುವ ಅರ್ಚಕನ ಹಿಂದೆ ಓಂ...ಓA... ಎಂದು ಗಂಟಾನಾದ ಗೈಯುವ ಭಕ್ತವೃಂದ ಒಂದು ವಿಶೇಷ ಅನುಭೂತಿ ಅನುಭವ ಉಂಟಾಗುವAತೆ ಮಾಡುತ್ತವೆ. ಬನ್ನಿ ಕೊಡಗಿನ ಸಮಸ್ತ ಭಕ್ತವೃಂದ ಈ ವಿಶೇಷ ಘಳಿಗೆಯನ್ನು, ಸಂಭ್ರಮವನ್ನು ಕಣ್ಮನ ತುಂಬಿಕೊಳ್ಳೋಣ. ಅನವರತವೂ ಆರಾಧಿಸಲ್ಪಡುತ್ತಿರುವ ಲೋಕಕ್ಕೆ ಒಬ್ಬನೇ ಆದ ಇಗ್ಗುತ್ತಪ್ಪನ ಕೃಪಾಶೀರ್ವಾದಗಳಿಗೆ ಪಾತ್ರರಾಗೋಣ. ಹಾಗೆಯೇ ಕೊಡಗಿಗೆ ಪುತ್ತರಿಯ ಸಂಭ್ರಮವನ್ನು ತಂದAತಹ, ಮಾನವನ ಪ್ರಕೃತಿಯೊಡನೆಯ ಅಪಚಾರಗಳ ಹೊರತಾಗಿಯೂ, ಯಾವುದೇ ಪ್ರಕೃತಿ ವಿಕೋಪ ಬಾರದಂತೆ ಪೊಮ್ಮಾಲೆ ಕೊಡಗನ್ನು ಪೊರೆದು ಕಾಯುತ್ತಿರುವ ಮಳೆ-ಬೆಳೆಗಳ ವರದಾತನೆಂದೇ ಖ್ಯಾತಿವೆತ್ತ ಶ್ರೀ ಇಗ್ಗುತ್ತಪ್ಪನ ಪತ್ತಾಪರೆಯ ಪಡಸಾಲೆಯಲ್ಲಿ ಪ್ರತೀ ವರ್ಷ ನಿರ್ಧಾರಗೊಳ್ಳುವ ಪುತ್ತರಿಯ ಶುಭಮುಹೂರ್ತ ಘಳಿಗೆಗೆ ಕಿಂಚಿತ್ತೂ ಕುಂದಾಗದAತೆ ಕೊಡಗಿನವ ರಾದ ನಾವೆಲ್ಲರೂ ಒಂದಾಗಿ ನಮಿಸೋಣ. (ಮುಗಿಯಿತು)

-ಪರದಂಡ ಸುಬ್ರಮಣಿ ಕಾವೇರಪ್ಪ