ಗೋಣಿಕೊಪ್ಪಲು, ನ. ೧೮: ಕೊಡಗು - ಮೈಸೂರು ಸಂಪರ್ಕದ ರಾಜ್ಯ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದ್ದ ಬೃಹತ್ ಪ್ರಮಾಣದ ಗುಂಡಿ ಬಿದ್ದಿದ್ದ ರಸ್ತೆಯನ್ನು ವೀರಾಜಪೇಟೆ ತಾಲೂಕು ಲೋಕೋಪಯೋಗಿ ಇಲಾಖೆ ಗುಂಡಿ ಮುಚ್ಚುವ ಮೂಲಕ ವಾಹನ ಸವಾರರಿಗೆ ಅನುಕೂಲ ಕಲ್ಪಿಸಿದೆ.
ಗಡಿಭಾಗ ಆನೆಚೌಕೂರು - ತಿತಿಮತಿ ರಸ್ತೆಯು ಗುಂಡಿ ಬಿದ್ದಿದ್ದು ಇದರಿಂದ ವಾಹನ ಸವಾರರಿಗೆ ದಿನನಿತ್ಯ ತೀವ್ರ ತೊಂದರೆ ಆಗುತ್ತಿತ್ತು. ಇದನ್ನು ಮನಗಂಡ ‘ಶಕ್ತಿ’ ಈ ಬಗ್ಗೆ ಸಮಗ್ರ ವರದಿ ಪ್ರಕಟಿಸಿ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಿತ್ತು.
ಸುದ್ದಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆಯ ಎಇಇ ಸಿದ್ದೇಗೌಡ ಇಂಜಿನಿಯರ್ ನವೀನ್‌ರವರು ವಿಶೇಷ ಆಸಕ್ತಿ ವಹಿಸಿ ಗುಣಮಟ್ಟದ ಗುಂಡಿ ಮುಚ್ಚುವ ಕೆಲಸವನ್ನು ಪೂರೈಸಿದ್ದಾರೆ. ಎರಡು ದಿನಗಳ ಕಾಲ ಈ ರಸ್ತೆಯಲ್ಲಿ ಬಿದ್ದಿದ್ದ ದೊಡ್ಡ ಪ್ರಮಾಣದ ಗುಂಡಿಗಳನ್ನು ಮುಚ್ಚಿದ್ದಾರೆ. ೫ ಕಿ.ಮೀ. ರಾಜ್ಯ ಹೆದ್ದಾರಿಯ ಗುಂಡಿ ಮುಚ್ಚುವ ಕೆಲಸ ಮುಗಿದಿದ್ದು ಗೋಣಿಕೊಪ್ಪ, ಹಾತೂರು, ವೀರಾಜಪೇಟೆ ಮಾರ್ಗದ ರಸ್ತೆಯ ಗುಂಡಿ ಮುಚ್ಚುವ ಕೆಲಸದಲ್ಲಿ ಇಲಾಖೆಯು ತೊಡಗಿದೆ. ಇಲಾಖೆಯು ಸಕಾಲದಲ್ಲಿ ಕೆಲಸ ನಿರ್ವಹಿಸಿದ ಬಗ್ಗೆ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. -ಹೆಚ್.ಕೆ. ಜಗದೀಶ್