ಸೋಮವಾರಪೇಟೆ, ನ. ೧೯: ಪ್ರಮುಖ ಬೇಡಿಕೆಯಾಗಿರುವ ರಸ್ತೆ ದುರಸ್ತಿ ಸೇರಿದಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿನ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ರೂಪಿಸುವ ಸಲುವಾಗಿ ತೋಳೂರುಶೆಟ್ಟಳ್ಳಿ ಮೂಲ ಸೌಕರ್ಯ ಅಭಿವೃದ್ಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಬೇಡಿಕೆ ಈಡೇರದಿದ್ದರೆ ಹೆದ್ದಾರಿ ತಡೆದು ಪ್ರತಿಭಟಿಸುವುದಾಗಿ ಸಮಿತಿಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಟಿ.ಕೆ. ಮಾಚಯ್ಯ ಅವರು, ಸೋಮವಾರಪೇಟೆಯಿಂದ ತೋಳೂರುಶೆಟ್ಟಳ್ಳಿ-ಕೂತಿ ಸಂಪರ್ಕಿಸುವ ರಸ್ತೆಯನ್ನು ಕಳೆದ ೨೦೦೫ರಲ್ಲಿ ರಾಜ್ಯ ಹೆದ್ದಾರಿ-೮೫ ಆಗಿ ಮೇಲ್ದರ್ಜೆಗೇರಿಸಿದ್ದು, ನಂತರ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ. ಲೋಕೋಪಯೋಗಿ ಇಲಾಖೆಯ ನಿರ್ಲಕ್ಷö್ಯಕ್ಕೆ ಈ ರಸ್ತೆ ಸಾಕ್ಷಿಯಾಗಿದೆ. ರಸ್ತೆಯನ್ನು ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಆರೋಪಿಸಿದರು.
ಈ ರಸ್ತೆಯಲ್ಲಿ ದಿನಂಪ್ರತಿ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು, ಶಾಲಾ ಕಾಲೇಜು ವಾಹನ, ಸಾರ್ವಜನಿಕರ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ರಸ್ತೆ ಕಿರಿದಾಗಿರುವುದರಿಂದ ಸಂಚಾರ ದುಸ್ತರವಾಗಿದೆ. ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಕಳೆದ ತಿಂಗಳಷ್ಟೇ ಜೀಪ್ ಮಗುಚಿ ದಿಲೀಪ್ ಎಂಬವರು ಸಾವನ್ನಪ್ಪಿದ್ದಾರೆ. ಕುಟುಂಬವು ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಯಾರು ಹೊಣೆ? ಎಂದು ಮಾಚಯ್ಯ ಪ್ರಶ್ನಿಸಿದರು.
ಕಲ್ಕಂದೂರು-ಕೂತಿ ರಸ್ತೆ ಕೇವಲ ಮೂರೂವರೆ ಮೀಟರ್ ಅಗಲವಿದೆ. ಕಲ್ಕಂದೂರು ಜಂಕ್ಷನ್‌ನಿAದ ಎಡದಂಟೆ ಗಡಿಕಲ್ಲಿನವರೆಗೆ ೧೦ ಕಿ.ಮೀ. ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿ ಮಾಡಬೇಕು. ತಪ್ಪಿದ್ದಲ್ಲಿ ತಾ. ೩೦ ರ ನಂತರ ಸುತ್ತಮುತ್ತಲ ಗ್ರಾಮಸ್ಥರ ಸಹಕಾರದಿಂದ ರಸ್ತೆ ತಡೆಯೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದರೊಂದಿಗೆ ತೋಳೂರುಶೆಟ್ಟಳ್ಳಿ ದೊಡ್ಡಮನೆಕೊಪ್ಪ, ನಡ್ಲಕೊಪ್ಪ, ಸಿಂಗನಳ್ಳಿ, ವನಗೂರುಕೊಪ್ಪ, ಕೂತಿ-ಎಡದಂಟೆ, ಚಿಕ್ಕತೋಳೂರು ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ. ರಸ್ತೆಗಳು ಮಳೆನೀರು ಹರಿಯುವ ಚರಂಡಿಗಳAತಾಗಿವೆ. ೫೦ ರೂಪಾಯಿ ಇದ್ದ ಆಟೋ ಬಾಡಿಗೆ ೨೦೦ಕ್ಕೆ ಏರಿಕೆಯಾಗಿದೆ. ಕೃಷಿ ಫಸಲು ಸಾಗಾಟವೂ ಕಷ್ಟಕರವಾಗಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಅನಾರೋಗ್ಯಪೀಡಿತರಿಗೆ ಭಾರೀ ಸಮಸ್ಯೆಯಾಗಿದೆ ಎಂದು ವಿವರಿಸಿದರು.
ರಸ್ತೆ ಅವ್ಯವಸ್ಥೆಯನ್ನು ಗಮನಿಸಿದರೆ ತೋಳೂರುಶೆಟ್ಟಳ್ಳಿ ಗ್ರಾ.ಪಂ. ಸೋಮವಾರಪೇಟೆ ತಾಲೂಕಿನಲ್ಲಿದೆಯೋ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಿದೆ. ಸಮಸ್ಯೆಗಳ ಬಗ್ಗೆ ಗ್ರಾ.ಪಂ. ಸಹ ಯಾವುದೇ ಸ್ಪಂದನ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಲೋಕೋಪಯೋಗಿ ಇಲಾಖೆಯು ರಸ್ತೆಗಳ ಅವ್ಯವಸ್ಥೆ ಬಗ್ಗೆ ದಿವ್ಯಮೌನ ವಹಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳಪೆ ಕಾಮಗಾರಿ ಆರೋಪ: ೧ ಕೋಟಿಗೂ ಅಧಿಕ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಜಲಜೀವನ್ ಮಿಷನ್ ಕಾಮಗಾರಿ ಕಳಪೆಯಾಗಿದೆ. ನೀರಿನ ಟ್ಯಾಂಕ್‌ನಲ್ಲಿ ಈಗಲೇ ಸೋರಿಕೆಯಾಗುತ್ತಿದೆ. ಹೊಸದಾಗಿ ಪೈಪ್‌ಲೈನ್ ಅಳವಡಿಸುವ ಬದಲು ಹಳೆಯ ಪೈಪ್‌ಲೈನ್‌ಗಳಿಗೆ ಸಂಪರ್ಕ ನೀಡಲಾಗಿದೆ. ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಗೋಷ್ಠಿಯಲ್ಲಿದ್ದ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಎಸ್. ಸುರೇಶ್ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಗ್ರಾಮ ಸಭೆ ವೇದಿಕೆಯಾಗಿದ್ದು, ತೋಳೂರುಶೆಟ್ಟಳ್ಳಿಯಲ್ಲಿ ಗ್ರಾಮ ಸಭೆಯನ್ನೇ ಕರೆಯತ್ತಿಲ್ಲ. ಗ್ರಾ.ಪಂ. ಇದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ ಎಂದ ಪ್ರಮುಖರು, ಸಮಸ್ಯೆಗಳ ಈಡೇರಿಕೆಗಾಗಿ ಆಗ್ರಹಿಸಿ ಹೋರಾಟದ ಮಾರ್ಗ ಹಿಡಿಯುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಎಡದಂಟೆ ಲವ, ಖಜಾಂಚಿ ಹೆಚ್.ಜೆ. ಮಹೇಶ್, ಪ್ರಮುಖರಾದ ಐ.ಹೆಚ್. ನಿಂಗಪ್ಪ, ಕೃಷ್ಣಪ್ಪ ಅವರುಗಳು ಉಪಸ್ಥಿತರಿದ್ದರು.