ಆಟೋದಲ್ಲಿ ನಿಗೂಢ ಸ್ಫೋಟ : ಚಾಲಕ, ಪ್ರಯಾಣಿಕನಿಗೆ ಗಾಯ

ಮಂಗಳೂರು, ನ. ೧೯: ಮಂಗಳೂರಿನ ನಾಗುರಿಯಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಡ ಸ್ಫೋಟ ಸಂಭವಿಸಿದ್ದು ಆಟೋದಲ್ಲಿದ್ದ ಪ್ರಯಾಣಿಕ ಹಾಗೂ ಚಾಲಕನಿಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಹಾಗೂ ವಿಧಿವಿಜ್ಞಾನ ತಜ್ಞರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಮಾಹಿತಿ ನೀಡಿರುವ ಶಶಿಕುಮಾರ್ ಅವರು, ಪ್ರಯಾಣಿಕನನ್ನು ಕರೆದೊಯ್ಯುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿದೆ. ಪ್ರಯಾಣಿಕನ ಬಳಿಕ ಬ್ಯಾಗ್ ಇತ್ತು. ಈ ಸಂಬAಧ ಪರಿಶೀಲನೆ ನಡೆಸಲಾಗುತ್ತಿದೆ. ಸ್ಫೋಟದಿಂದಾಗಿ ಆಟೋ ಚಾಲಕ ಹಾಗೂ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಪಾಕ್ ಪರ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಅಮಾನತು

ಬೆಂಗಳೂರು, ನ. ೧೯: ಪಾಕಿಸ್ತಾನದ ಪರ ಘೋಷಣೆ ಕೂಗಿ ಬಂಧನ ಭೀತಿ ಎದುರಿಸುತ್ತಿರುವ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದ್ದು, ಪ್ರಕರಣ ಸಂಬAಧ ಪೊಲೀಸರು ಷರತ್ತುಬದ್ದ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ನ್ಯೂ ಹಾರಿಜಾನ್ ಖಾಸಗಿ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು. ಓರ್ವ ಯುವಕ ಹಾಗೂ ಯುವತಿ ಈ ರೀತಿ ಕೂಗಿದ್ದ ವಿಡಿಯೋ ವೈರಲ್ ಆಗಿತ್ತು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕ ಹಾಗೂ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ತಾವು ತಮಾಷೆಗಾಗಿ ಈ ರೀತಿ ಮಾಡಿರುವುದಾಗಿ ಮಾರತ್ ಹಳ್ಳಿ ಪೊಲೀಸರ ಮುಂದೆ ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದಾರೆ. ಸದ್ಯ ಪೊಲೀಸರು ಯುವಕ ಮತ್ತು ಯುವತಿಯ ಕಾಲೇಜ್ ಐಡಿ ಮತ್ತು ಆಧಾರ್ ಕಾರ್ಡ್ ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ಕ್ಷಮೆ ಕೇಳಿ, ತಮಾಷೆ ಎಂದು ಹೇಳಿಕೆ ನೀಡಿದ್ದರೂ, ಇವರೆಲ್ಲ ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಸ್ಟೇಷನ್ ಬೇಲ್ ಆಧಾರದ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಾರತ್‌ಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದು, ಕಾಲೇಜು ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ದಾವಣೆಗೆರೆ ಮೂಲದ ರಿಯಾ (೧೮), ಪಂಜಾಬ್ ಮೂಲದ ಆರ್ಯನ್ (೧೮) ಮತ್ತು ಆಂಧ್ರ ಮೂಲದ ೧೭ ವರ್ಷದ ವಿದ್ಯಾರ್ಥಿ ದಿನಕರ್ ವಿರುದ್ಧ ಐಪಿಸಿ ೧೫೩, ೫೦೫(೧) ಬಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಲೋಪ: ನ್ಯಾಯಾಂಗ ತನಿಖೆ ಇಲ್ಲ - ಸಿಎಂ ಬೊಮ್ಮಾಯಿ

ಬೆಂಗಳೂರು, ನ. ೧೯: ಮತದಾರರ ಪಟ್ಟಿ ಪರಿಷ್ಕರಣೆಯೆ ಲೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಕಾಂಗ್ರೆಸ್ ಬೇಡಿಕೆಯ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಂಗ ತನಿಖೆಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದು ಕ್ರಿಮಿನಲ್ ಪ್ರಕರಣ, ತ್ವರಿತವಾಗಿ ತನಿಖೆಯಾಗಬೇಕು. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ನಿನ್ನೆ ಚಿಲುಮೆ ಸಂಸ್ಥೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿ ಕೆಲವರನ್ನು ಬಂಧಿಸಲಾಗಿದೆ. ತೀವ್ರ ಗತಿಯಲ್ಲಿ ತನಿಖೆ ನಡೆದಿದೆ ಎಂದು ಹೇಳಿದ್ದಾರೆ. ಮಂಗಳೂರಿನಲ್ಲಿAದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪ್ರತಿವರ್ಷ ಇಲ್ಲವೇ ಚುನಾವಣಾ ಸಂದರ್ಭದಲ್ಲಿ ನಡೆಯುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂಬAಧ ಕೇಳಿ ಬಂದಿರುವ ಆರೋಪಗಳು ಅಪರಾಧ ಪ್ರಕರಣಗಳಾಗಿದೆ. ಹಾಗಾಗಿ, ಪೊಲೀಸ್ ತನಿಖೆಯೇ ಸೂಕ್ತ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.

ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಅನಾವರಣ

ಮಂಗಳೂರು, ನ. ೧೯: ಇಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿ ಬಳಿಕ ಮಾತನಾಡಿದ ಅವರು, ದೇಶ -ವಿದೇಶಗಳಲ್ಲಿ ಇಂತಹ ಸ್ಮಾರಕಗಳಿಗೆ ಬಹಳ ಮಹತ್ವವಿದೆ. ಇಂತಹ ಸ್ಮಾರಕಗಳು ನಮ್ಮ ಇತಿಹಾಸ, ಸಂಸ್ಕೃತಿ-ಪರAಪರೆಗಳನ್ನು ಬಿಂಬಿಸುವ ಜೊತೆಗೆ ನಮ್ಮ ಅಸ್ಮಿತೆಯನ್ನೂ ಬಿಂಬಿಸುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತೀಯತೆ, ಇದಕ್ಕೆ ಪೂರಕವಾದ ಸರ್ಕಾರದ ನೀತಿಗಳು ಭಾರತದ ಅಸ್ಮಿತೆಯನ್ನು ಗಟ್ಟಿಗೊಳಿಸುತ್ತದೆ. ಭಾರತದ ಸ್ವಾತಂತ್ರ‍್ಯಕ್ಕಾಗಿ ಜೀವತೆತ್ತ ಅನೇಕ ಹೋರಾಟಗಾರರ ಬಗ್ಗೆ ನಮ್ಮ ಯುವಜನತೆಗೆ, ದೇಶ-ವಿದೇಶಗಳಿಗೆ ಅರಿವು ಮೂಡಿಸಬೇಕು. ಜಪಾನ್ ನಲ್ಲಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ, ಅಮೆರಿಕಾದಲ್ಲಿ ಮಹಾತ್ಮಗಾಂದಿ ಸ್ಮಾರಕ ನಮಗೆ ಸ್ಪೂರ್ತಿ ನೀಡುತ್ತಿದೆ. ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕವನ್ನು ಬೆಂಗಳೂರಿನಲ್ಲಿಯೂ ನಿರ್ಮಿಸಲಾಗುವುದು. ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿಯೂ ಅಳವಡಿಸಲಾಗುವುದು ಎಂದರು.

ಶಬರಿಮಲೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅವಘಡ

ಪತ್ತನಂತಿಟ್ಟ, ನ. ೧೯: ಆಂಧ್ರಪ್ರದೇಶದಿAದ ಶಬರಿಮಲೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಬಾಲಕ ಸೇರಿದಂತೆ ೨೦ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಶನಿವಾರ ಜಿಲ್ಲೆಯ ಲಾಹಾ ಬಳಿ ನಡೆದಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ೪೪ ಯಾತ್ರಾರ್ಥಿಗಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ೮ ವರ್ಷದ ಬಾಲಕ ಸೇರಿದಂತೆ ಮೂವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ೧೮ ಮಂದಿಯನ್ನು ಇಲ್ಲಿನ ಜನರಲ್ ಆಸ್ಪತ್ರೆಗೆ ಮತ್ತು ಉಳಿದವರನ್ನು ಸಮೀಪದ ಪೆರಿನಾಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ಜಂಟಿಯಾಗಿ ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರಿಂದ ಅಪಘಾತದ ತೀವ್ರತೆ ಕಡಿಮೆಯಾಗಿದೆ. ಸ್ಥಳಕ್ಕಾಗಮಿಸಿದ ಆರೋಗ್ಯ ಸಚಿವೆ ವೀಣಾ ಜಾರ್ಜ್, ರಕ್ಷಣಾ ಕಾರ್ಯಾಚರಣೆ ಹಾಗೂ ಯಾತ್ರಾರ್ಥಿಗಳ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಬಳಿಕ ಮಾತನಾಡಿದ ಅವರು, ಗಾಯಗೊಂಡ ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗಿದೆ ಎಂದರು.

ಕಾರಿನೊಳಗೆ ಮಾಡೆಲ್ ಮೇಲೆ ಗ್ಯಾಂಗ್ ರೇಪ್ : ಬಂಧನ

ಕೊಚ್ಚಿ, ನ. ೧೯: ಚಲಿಸುತ್ತಿದ್ದ ಕಾರಿನೊಳಗೆ ೧೯ ವರ್ಷದ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬAಧಿಸಿದAತೆ ಕೇರಳ ಪೊಲೀಸರು ಶನಿವಾರ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಕೊಡಂಗಲ್ಲೂರು ಮೂಲದ ಮೂವರು ವ್ಯಕ್ತಿಗಳು ಗುರುವಾರ ರಾತ್ರಿ ತಮ್ಮ ಚಲಿಸುತ್ತಿದ್ದ ವಾಹನದಲ್ಲಿ ಕಾಸರಗೋಡು ಮೂಲದ ರೂಪದರ್ಶಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಸಿ.ಎಚ್. ನಾಗರಾಜು ತಿಳಿಸಿದ್ದಾರೆ. ಸಂತ್ರಸ್ತೆಗೆ ಪರಿಚಯವಿರುವ ಆರೋಪಿ ಮಹಿಳೆ ರಾಜಸ್ಥಾನ ಮೂಲದವಳು ಮತ್ತು ಆಕೆ ಕೂಡ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾಳೆ. ನಾಲ್ವರು ಆರೋಪಿಗಳ ಹಿನ್ನೆಲೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತರು, ಘಟನೆಯಲ್ಲಿ ಮಾನವ ಕಳ್ಳಸಾಗಣೆಯ ಅಂಶವೂ ಇದೆ. ಈ ಉದ್ದೇಶಕ್ಕಾಗಿ ಒಬ್ಬ ವ್ಯಕ್ತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಒಳಗೊಂಡಿರುವ ಸೆಕ್ಷನ್ ೩೭೦ ಅನ್ನು ಸಹ ಸೇರಿಸಲಾಗಿದೆ' ಎಂದು ತಿಳಿಸಿದ್ದಾರೆ. ನಗರದ ಕಾಕ್ಕನಾಡ್‌ನಲ್ಲಿ ವಾಸವಿದ್ದ ಸಂತ್ರಸ್ತೆಯನ್ನು ಆಕೆಯ ಸ್ನೇಹಿತೆ ರಾಜಸ್ಥಾನಿ ಮಹಿಳೆ ಡಿಜೆ ಪಾರ್ಟಿಗೆ ಆಹ್ವಾನಿಸಿದ್ದಳು ಮತ್ತು ಪುರುಷರಿಗೆ ಪರಿಚಯ ಮಾಡಿಸಿದ್ದಳು ಎಂದು ಶುಕ್ರವಾರ ರಾತ್ರಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡ ನಂತರ ಪೊಲೀಸರು ತಿಳಿಸಿದ್ದಾರೆ.