ಮಡಿಕೇರಿ, ನ. ೧೮ : ಮೊನ್ನೆವರೆಗೂ ಮಡಿಕೇರಿಯಿಂದ ವೀರಾಜಪೇಟೆ ಕಡೆಗೆ ಸಾಗುವ ಹೆದ್ದಾರಿಯ ಮೇಕೇರಿ ಬಳಿಯಿಂದ ಕಗ್ಗೋಡ್ಲುವರೆಗಿನ ರಸ್ತೆಯಲ್ಲಿ ಓರ್ವ ಮನುಷ್ಯನ ಹೂಳುವಷ್ಟು ದೊಡ್ಡದಾದ ಗುಂಡಿಗಳಿದ್ದವು., ಲಘು ಹಾಗೂ ಭಾರೀ ವಾಹನಗಳು ಹೇಗೋ ಸುಧಾರಿಸಿಕೊಂಡು ಸಾಗುತ್ತಿದ್ದವು., ದ್ವಿಚಕ್ರ ವಾಹನ ಸವಾರರು ಗುಂಡಿಯನ್ನು ತಪ್ಪಿಸಿಕೊಂಡು ಮೆಲ್ಲನೆ ನುಸುಳಿಕೊಂಡು ಹೋಗುತ್ತಿದ್ದರು., ಆದರೆ.., ನಿನ್ನೆಯಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳೆಲ್ಲವೂ ಹೆದರಿಕೊಂಡು ಮೆಲ್ಲನೆ ಸಾಗುತ್ತಿವೆ., ದ್ವಿಚಕ್ರ ವಾಹನಗಳಂತೂ ಬೀಳುವದೇ ಆಗಿದೆ..! ಇದಕ್ಕೆ ಕಾರಣ ರಸ್ತೆಯ ಗುಂಡಿಗಳನ್ನು ತರಾತುರಿಯಲ್ಲಿ ದೊಡ್ಡ ದೊಡ್ಡ ಜಲ್ಲಿಕಲ್ಲುಗಳನ್ನು ತುಂಬಿ ಮುಚ್ಚಿರುವದು., ಗುಂಡಿಗಳಿಗೆ ತುಂಬಲಾಗಿರುವ ಜಲ್ಲಿಕಲ್ಲುಗಳು ಭಾರೀ ವಾಹನಗಳು ಸಂಚರಿಸುವಾಗ ಚದುರಿ ಹೋಗಿ ರಸ್ತೆಯಿಡೀ ಚೆಲ್ಲಾಡಿದ್ದು, ಇದರಿಂದಾಗಿ ಇಲ್ಲಿ ಪ್ರಾಣಕ್ಕೆ ಕುತ್ತು ಬರುವಂತಹ ಪರಿಸ್ಥಿತಿ ಎದುರಾಗಿದೆ..!

ಮಡಿಕೇರಿ-ವೀರಾಜಪೇಟೆ ರಸ್ತೆ ಹಾಳು ಬಿದ್ದು ಹೋಗಿ ವರ್ಷಗಳೇ ಕಳೆದಿವೆ., ಆಗಾಗ್ಗೆ ಗುಂಡಿ ಮುಚ್ಚುತ್ತಾ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಕೆಲಸವಾಗುತ್ತಿತ್ತೇ ವಿನಃ ದುರಸ್ತಿ ಭಾಗ್ಯ ಕಾಣಲೇ ಇಲ್ಲ., ಇತ್ತೀಚೆಗೆ ಸುರಿದ ಮಳೆಯಿಂದಾಗಿ ಭಾರೀ ಬುದ್ಧಿವಂತ ಇಂಜಿನಿಯರುಗಳ ಜರ್ಮನ್ ಟೆಕ್ನಾಲಜಿಯಡಿ ಮಂಗಳೂರು ರಸ್ತೆಯ ಜಿಲ್ಲಾಧಿಕಾರಿಗಳ ಭವನದೆದೆರು ನಿರ್ಮಿಸಲಾದ ರೂ.೭ ಕೋಟಿ ವೆಚ್ಚದ ತಡೆಗೋಡೆ ಕುಸಿಯಲಾರಂಭಿಸಿದಾಗ ಆ ರಸ್ತೆಯನ್ನು ಬಂದ್ ಮಾಡಿ ಮೇಕೇರಿ ರಸ್ತೆಗಾಗಿ ಮಂಗಳೂರು ಕಡೆಗೆ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು. ಇದರಿಂದಾಗಿ ರಸ್ತೆ ಮತ್ತಷ್ಟು ಹಳ್ಳ ಹಿಡಿಯುವಂತಾಯಿತು.,

ಈ ನಡುವೆ ಜಿಲ್ಲೆಯ ರಸ್ತೆಗಳ ದುಸ್ಥಿತಿಗಳ ಬಗ್ಗೆ ‘ಶಕ್ತಿ’ ಸರಣಿ ರೂಪದಲ್ಲಿ ಬೆಳಕು ಚೆಲ್ಲಿದ ಹಿನ್ನೆಲೆಯಲ್ಲಿ ಮೇಕೇರಿ ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಮೊನ್ನೆ ರಾತೋರಾತ್ರಿ ಜಲ್ಲಿಕಲ್ಲುಗಳನ್ನು ತಂದು ಗುಂಡಿಗೆ ಸುರಿದು ಹೋಗಿದ್ದಾರೆ. ಒಂದು ವೇಳೆ ಕಲ್ಲು ಪುಡಿಯೊಂದಿಗೆ ಸಣ್ಣ ಜಲ್ಲಿ(ಬೇಬಿ ಜಲ್ಲಿ) ಸುರಿದಿದ್ದರೂ ಇಷ್ಟೊಂದು ತೊಂದರೆಯಾಗುತ್ತಿರಲಿಲ್ಲ. ನಿನ್ನೆ ಬೆಳಿಗ್ಗೆಯಿಂದಲೇ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ದ್ವಿಚಕ್ರ ವಾಹನ ಸವಾರರು ಕಲ್ಲುಗಳ ಮೇಲೆ ಸರ್ಕಸ್ ಮಾಡುತ್ತಾ., ವಾಹನದ ಮೇಲೆ ಹಿಡಿತ ಸಾಧಿಸಲಾಗದೆ ಅಲ್ಲಲ್ಲೇ ಮಗುಚಿ ಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ರಸ್ತೆ ದುಸ್ಥಿತಿ ಬಗ್ಗೆ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಗುತ್ತಿಗೆದಾರನಿಗೆ ‘ಬಿಸಿ’ ಮಾಡಿದ್ದರಿಂದ ಎಲ್ಲಿ ತನ್ನ ಗುತ್ತಿಗೆ ಕೈತಪ್ಪಿ ಹೋಗಲಿದೆಯೋ ಎಂಬ ಭಯದಿಂದ ಗುತ್ತಿಗೆದಾರ ಜಲ್ಲಿಗಳನ್ನು ತಂದು ತುಂಬಿರುವದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ..!

? ಸಂತೋಷ್