ಮುಳ್ಳೂರು, ನ. ೧೭: ‘ರಕ್ತದಾನದಿಂದ ಆರೋಗ್ಯ ವೃದ್ಧಿ’ ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಅಭಿಪ್ರಾಯಪಟ್ಟರು. ಅವರು ಸಮೀಪದ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜ ಮತ್ತು ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೪ನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತ ಹೀನತೆ, ಪ್ರಸವ ಸಂದರ್ಭ, ಅಪಘಾತ ಸಂದರ್ಭ, ರೋಗಿಗೆ ಶಸ್ತç ಚಿಕಿತ್ಸೆ ನೀಡುವ ಸಂದರ್ಭಗಳಲ್ಲಿ ಆಸ್ಪತ್ರೆಗಳಲ್ಲಿ ರಕ್ತ ಕೊಡಬೇಕಾಗುತ್ತದೆ. ದಾನಿಗಳು ನೀಡಿದ ರಕ್ತವನ್ನು ರಕ್ತನಿಧಿ ಕೇಂದ್ರದ ಮೂಲಕ ರೋಗಿಗಳಿಗೆ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ೧೮ ವರ್ಷದಿಂದ ೬೫ ವರ್ಷದವರೆಗಿನ ಆರೋಗ್ಯವಂತರು ರಕ್ತದಾನ ಮಾಡಬಹುದು ಎಂದರು.
ರಕ್ತನಿಧಿ ಕೇಂದ್ರವು ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳಲ್ಲಿ ರಕ್ತವನ್ನು ಸಂಗ್ರಹಿಸುತ್ತದೆ. ಕೊಡಗು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರದಲ್ಲಿ ಪ್ರತಿ ತಿಂಗಳು ರೋಗಿಗಳಿಗೆ ೩೫೦ ಯೂನಿಟ್ ರಕ್ತ ನೀಡಬೇಕಾಗುತ್ತದೆ. ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳಲ್ಲಿ ರಕ್ತ ಸಂಗ್ರಹ ಮಾಡಬೇಕಿರುವು ದರಿಂದ ಯುವಕ, ಯುವತಿಯರು ಸೇರಿದಂತೆ ಪ್ರತಿಯೊಬ್ಬರ ಪಾತ್ರವಿದೆ. ಈ ನಿಟ್ಟಿನಲ್ಲಿ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜವು ರಕ್ತದಾನ ಶಿಬಿರ ಆಯೋಜನೆ ಮಾಡುತ್ತಿರುವುದು ಶ್ಲಾಘನಿಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್ ಮಾತನಾಡಿ, ಸಮಾಜ ಸೇವೆಯಲ್ಲಿ ರಕ್ತದಾನವು ಶ್ರೇಷ್ಠ ಸೇವೆಯಾಗಿದ್ದು ಪ್ರತಿಯೊಬ್ಬ ಆರೋಗ್ಯವಂತ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವವನ್ನು ಉಳಿಸುವ ಮನೊಭಾವನೆ ಬೆಳೆಸಿಕೊಳ್ಳ ಬೇಕೆಂದರು. ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜ ಪ್ರಾಥಮಿಕ ಆರೋಗ್ಯ ಕೇಂದ್ರದ ಜೊತೆ ರಕ್ತದಾನ ಶಿಬಿರದ ಆಯೋಜನೆಗೆ ಕೈಜೋಡಿಸುತ್ತಿರುವುದು ಶ್ಲಾಘನಿಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಮಾತನಾಡಿ, ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜ ಸ್ವಚ್ಛತಾ ಆಂದೋಲನ ಸೇರಿದಂತೆ ಹಲವು ಸಮಾಜ ಸೇವೆ ಕಾರ್ಯ ಮಾಡುತ್ತಿದ್ದು ಆಲೂರು ಸಿದ್ದಾಪುರ ಆರೋಗ್ಯ ಕೇಂದ್ರ ಸಹಭಾಗಿತ್ವದಲ್ಲಿ ಈಗ ೪ನೇ ಬಾರಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಕ್ತದಾನ ಮಾಡುವ ಆಸಕ್ತಿ ಬೆಳೆಸಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಹಿರಿಯ ನಿರೀಕ್ಷಣಾಧಿಕಾರಿ ಪ್ರವಿಣ್ಕುಮಾರ್, ಅರೆಭಾಷೆ ಗೌಡ ಸಮಾಜದ ಉಪಾಧ್ಯಕ್ಷ ಭಟ್ಯನ ಈರಪ್ಪ ಕಾರ್ಯದರ್ಶಿ ಕುಯುಮುಡಿ ಜಯಕುಮಾರ್, ಸಮಾಜದ ಸದಸ್ಯರು, ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು. ಶಿಬಿರದಲ್ಲಿ ಹಲವಾರು ಮಂದಿ ರಕ್ತದಾನ ಮಾಡಿದರು.