ಪೆರಾಜೆ, ನ. ೧೮: ಕೊಡಗಿನ ಪೆರಾಜೆ ಗ್ರಾಮದಿಂದ ದ.ಕ. ಜಿಲ್ಲೆಯ ಅರಂತೋಡು ಗ್ರಾಮವನ್ನು ಸಂಪರ್ಕಿಸುವ ಅಮೆಚೂರ್ ಸಮೀಪದ ಬಂಡ್ಯಡ್ಕ ತೂಗು ಸೇತುವೆ, ಅದರ ಕೆಳಗೆ ಹರಿಯುವ ಪಯಸ್ವಿನಿ ನದಿ, ನೋಡಲು ರಮಣೀಯ ವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಈ ಸೇತುವೆಯಲ್ಲಿ ದಿನನಿತ್ಯ ಸಂಚರಿಸುವ ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರು ಭಯಪಡುವ ಸ್ಥಿತಿ ಎದುರಾಗಿದೆ.
ಸೇತುವೆಗೆ ಹಾಕಲಾಗಿರುವ ಹಲಗೆಗಳು ಚೆನ್ನಾಗಿಯೇ ಕಂಡರೂ, ಹಲಗೆಗಳು ನಿಂತಿರುವ ಸರಳುಗಳು ತುಕ್ಕು ಹಿಡಿದಿದ್ದು. ಎರಡು ಬದಿಗಳ ಕಬ್ಬಿಣದ ಪಟ್ಟಿಗಳು ಸಂಪೂರ್ಣ ಶಿಥಿಲವಾಗಿವೆ. ಸೇತುವೆಯ ಕೆಳಭಾಗದ ಆಧಾರದ ಕಬ್ಬಿಣದ ಪಟ್ಟಿಗಳು ತುಂಡಾಗಿ ಬೀಳುವ ಹಂತದಲ್ಲಿವೆೆ. ಅಲ್ಲದೆ ಸೇತುವೆ ನಿಲ್ಲಲು ಅಳವಡಿಸಿರುವ ‘ರೋಪ್’ ಕೂಡ ತುಕ್ಕು ಹಿಡಿದಿದೆ. ಪ್ರತಿದಿನ ಇಲ್ಲಿ ಆತಂಕದಲ್ಲಿ ಓಡಾಡುವ ಪರಿಸ್ಥಿತಿ ಇದೆ ಎಂದು ಇಲ್ಲಿನ ಗ್ರಾಮಸ್ಥರು ದೂರಿದ್ದಾರೆ.
ತೂಗು ಸೇತುವೆ ನಿರ್ಮಾಣಗೊಂಡು ೩೦ ವರ್ಷಗಳೆ ಕಳೆದಿದೆ. ಅದು ಸಂಪೂರ್ಣ ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಓಡಾಡುವುದಕ್ಕೆ ಕಷ್ಟ ಮತ್ತು ಅಪಾಯ ಕೂಡ. ಹಾಗೆ ಅದರ ದುರಸ್ತಿಗೆ ರೂ.೫೦ ಲಕ್ಷಕ್ಕಿಂತಲೂ ಹೆಚ್ಚು ಅನುದಾನದ ಅವಶ್ಯಕತೆ ಇದೆ. ತೂಗು ಸೇತುವೆಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ದುರಸ್ತಿ ಮಾಡಬೇಕಾಗಿರುವುದರಿಂದ ಮತ್ತು ದುರಸ್ತಿಗೆ ಸ್ಥಳೀಯವಾಗಿ ನುರಿತ ಕೆಲಸಗಾರರ ಕೊರತೆ ಇರುವುದರಿಂದ ತೂಗು ಸೇತುವೆ ಬದಲಾಗಿ ಕಾಲು ಸೇತುವೆ ನಿರ್ಮಾಣ ಮಾಡುವುದು ಉತ್ತಮ.
-ನಾಗೇಶ್ ಕುಂದಲ್ಪಾಡಿ,
ಅಧ್ಯಕ್ಷರು ಅಕ್ರಮ ಸಕ್ರಮ ಸಮಿತಿ, ಮಡಿಕೇರಿ ತಾಲೂಕು
ಹಲವಾರು ಕುಟುಂಬಗಳ ಸಂಪರ್ಕ ಕೊಂಡಿಯಾಗಿರುವ ಸೇತುವೆಯಲ್ಲಿ ನೂರಾರು ಜನ ಸಂಚರಿಸುತ್ತಿರುತ್ತಾರೆ.
ಇತ್ತೀಚಿನ ಮಳೆಗೆ ನದಿಯ ನೀರು ಹಾಗೂ ಅದರೊಂದಿಗೆ ಸಾಗಿ ಬಂದ ಮರದ ದಿಮ್ಮಿಗಳ ಹೊಡೆತಕ್ಕೆ ಅಮೆಚೂರ್ನಲ್ಲಿರುವ ತೂಗುಸೇತುವೆಯು ಅತ್ಯಂತ ಅಪಾಯದ ಸ್ಥಿತಿ ತಲುಪಿದೆ. ಇದನ್ನು ಸರಿಪಡಿಸಲು ಪಂಚಾಯಿತಿಯಲ್ಲಿ ಅನುದಾನದ ಕೊರತೆ ಇದ್ದು, ಇದಕ್ಕೆ ಸಂಬAಧಪಟ್ಟ ಅಧಿಕಾರಿಗಳು ಇದನ್ನು ದುರಸ್ತಿಗೊಳಿಸಬೇಕಿದೆ.
-ಚಂದ್ರಕಲಾ ಬಳ್ಳಡ್ಕ, ಅಧ್ಯಕ್ಷರು ಗ್ರಾಮ ಪಂಚಾಯತ್ ಪೆರಾಜೆ
ತೂಗು ಸೇತುವೆ ನಿರ್ವಹಣೆಯ ಕೊರತೆಯಿಂದ ತುಕ್ಕು ಹಿಡಿದು ಶಿಥಿಲಾವಸ್ಥೆಗೆ ತಲುಪಿದೆ. ಆದರೆ ಇದರ ನಿರ್ವಹಣೆಯ ವೆಚ್ಚ ಅತೀ ದುಬಾರಿ ಆಗುವುದರಿಂದ ಗ್ರಾಮ ಪಂಚಾಯಿತಿಯಿAದ ಅಷ್ಟೊಂದು ಅನುದಾನ ನೀಡಲು ಸಾಧ್ಯವಿಲ್ಲ. ಸರ್ಕಾರದಿಂದ ಬರುವ ಇತರ ಅನುದಾನದಲ್ಲಿ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಬೇಕಿದೆ.
-ಸುಭಾಷ್ ಚಂದ್ರ ಬಂಗಾರಕೋಡಿ,
ಸದಸ್ಯರು ಗ್ರಾಮ ಪಂಚಾಯತ್ ಪೆರಾಜೆ, ಅಮೆಚೂರ್ ವಾರ್ಡ್
ನೀರಿನಲ್ಲಿ ಬಂದ ಮರದ ದಿಮ್ಮಿಗಳು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ತೂಗು ಸೇತುವೆ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಅಂಕುಡೊAಕಾಗಿದೆ. ಎರಡು ಬದಿಯ ಪಿಲ್ಲರ್ಗಳಿಂದ ಸೇತುವೆಗೆ ಅಳವಡಿಸಿದ ಕಬ್ಬಿಣ ಕಂಬಿಗಳು ಹಿಂದಕ್ಕೆ ಹೋಗಿ ಅಪಾಯದಲ್ಲಿವೆ.
ಶಾಲೆ-ಕಾಲೇಜು ಹಾಗೂ ನಿತ್ಯ ಸಂಚಾರಕ್ಕೂ ಇದೇ ತೂಗುಸೇತುವೆ...!
ಗ್ರಾಮದ ಮಕ್ಕಳು ಶಾಲಾ- ಕಾಲೇಜುಗಳಿಗೆ ತೆರಳಲು ಕೂಡ ಇದೇ ತೂಗು ಸೇತುವೆಯನ್ನು ಬಳಸಿ ಅರಂತೋಡುಗೆ ತೆರಳಬೇಕಿದ್ದು, ಸೇತುವೆ ಪಾಳುಬಿದ್ದ ಸ್ಥಿತಿಗೆ ತಲುಪಿರುವುದು ಎಲ್ಲರಲ್ಲೂ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಈ ಭಾಗದಲ್ಲಿ ವಾಸಿಸುತ್ತಿರುವ ಹೆಚ್ಚಿನವರು ಕೃಷಿಕರಾಗಿದ್ದು, ತಮ್ಮ ಅಗತ್ಯ ಕೆಲಸಗಳಿಗೆ ಪಟ್ಟಣಕ್ಕೆ ಹೋಗಲು ಇರುವ ಸಮೀಪದ ಏಕೈಕ ದಾರಿಯೆಂದರೆ ಈ ತೂಗು ಸೇತುವೆ.
ಅವಘಡಗಳು ನಡೆಯುವ ಮುನ್ನ ಎಚ್ಚೆತ್ತುಕೊಳ್ಳಬೇಕು
ಗುಜರಾತ್ ತೂಗುಸೇತುವೆ ಮುರಿದುಬಿದ್ದು ನೂರಾರು ಜನರು ಪ್ರಾಣಕಳೆದು ಕೊಂಡ ಸುದ್ದಿಯನ್ನು ನಾವು ಈಗಾಗಲೇ ಕೇಳಿದ್ದೇವೆ, ಸುಮಾರು ೩೦ ವರ್ಷಗಳ ಹಿಂದೆ ನಿರ್ಮಿಸಿದ ಪೆರಾಜೆಯ ಹ್ಯಾಂಗಿAಗ್ ಬ್ರಿಡ್ಜ್ ಕೂಡ ಅದೇ ಸ್ಥಿತಿಯಲ್ಲಿದ್ದು, ಸಿ.ಪಿ. ಪೆರಾಜೆ ಹಾಗೂ ಕೆ.ಪೆರಾಜೆ ಗ್ರಾಮದ ಹಲವಾರು ಕುಟುಂಬಗಳು ಸಂಚಾರಕ್ಕೆ ಇದನ್ನೆ ಅವಲಂಬಿಸಿವೆ,
ಒAದರ್ಥದಲ್ಲಿ ಸಂಪೂರ್ಣ ತೂಗು ಸೇತುವೆಯನ್ನೇ ಪುನಃ ನಿರ್ಮಿಸುವ ಅನಿವಾರ್ಯತೆ ಕೂಡ ಇಲ್ಲಿದ್ದು, ಕೆಲ ವರ್ಷಗಳ ಹಿಂದೆ ಈ ಸೇತುವೆ ನಿರ್ಮಾಸಿದ ಗಿರೀಶ್ ಭಾರದ್ವಾಜ್ ಅವರು ರೋಪ್ ಅನ್ನು ಬದಲಾಯಿಸಲು ಸೂಚನೆ ನೀಡಿದ್ದರು ಎಂದು ಸ್ಥಳೀಯರು ತಿಳಿಸಿದ್ದು, ಸಂಬAಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಣ್ಣೆತ್ತಿ ನೋಡಬೇಕಿದೆ. ಈ ತೂಗುಸೇತುವೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅವಘಡಗಳು ನಡೆಯುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. -ಕಿರಣ್ ಕುಂಬಳಚೇರಿ