ಶ್ರೀಮಂಗಲ, ನ. ೧೮: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದ ಮುಖ್ಯ ರಸ್ತೆ ಬದಿ ಗ್ರಾಮಸ್ಥರು ಕಾಡು ಕಡಿದು ಸ್ವಚ್ಛಗೊಳಿಸಿದರು.

ಪೊರಾಡು ಗ್ರಾಮದ ಪೊನ್ಯ ಭಗವತಿ ದೇವಸ್ಥಾನದಿಂದ ರಸ್ತೆಯ ಎರಡು ಕಡೆ ಬೆಳೆದಿದ್ದ ಕಾಡನ್ನು ಯಂತ್ರವನ್ನು ಬಳಸಿ ಸ್ವಚ್ಛಗೊಳಿಸಿದರು.

ರಸ್ತೆಯ ಎರಡು ಕಡೆ ಕಾಡು ಬೆಳೆದಿದ್ದರಿಂದ ಎದುರಿನಿಂದ ಬರುವ ವಾಹನಗಳಿಗೆ ದಾರಿ ಮಾಡಿಕೊಡುವ ಸಂದರ್ಭ ವಾಹನಗಳಿಗೆ ಕಾಡು ತಾಗಿ ಹಾನಿಯಾಗುತ್ತಿತ್ತು. ತಿರುವಿನಲ್ಲಿ ಮುಂದೆ ಬರುವ ವಾಹನ ಕಾಣದೇ ತೊಂದರೆ ಆಗುತ್ತಿತ್ತು.

ಈ ಬಗ್ಗೆ ಬಿರುನಾಣಿ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದ ಕಾರಣ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಕಾಡು ಕಡಿದರು. ಈ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮದ ರಿವರ್ ಸೈಡ್ ಅಸೋಸಿಯೇಷನ್ ಅಧ್ಯಕ್ಷ ಬಲ್ಯಮೀದೇರಿರ ಸಂಪತ್, ಕಾರ್ಯದರ್ಶಿ ಮೀದೇರಿರ ಜೀವನ್ ಮತ್ತು ಸದಸ್ಯರು ಹಾಗೂ ಪೊರಾಡು ಊರು ಪಂಚಾಯಿತಿ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್, ಕಾರ್ಯದರ್ಶಿ ಮೀದೇರಿರ ಹರೀಶ್ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.