ಮಡಿಕೇರಿ, ನ. ೧೮: ನಗರದ ಹಲವು ಕಡೆಗಳಲ್ಲಿ ಹರಿಯುವ ರಾಜಕಾಲುವೆಗಳು ಒತ್ತುವರಿಯಿಂದ ಮಳೆಗಾಲದಲ್ಲಿ ತೀವ್ರ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಗರ ಸಭೆಯಿಂದ ಅಗತ್ಯ ದಾಖಲೆಗಳನ್ನು ಕ್ರೋಢಿಕರಿಸಿ ಕಾಲುವೆ ಒತ್ತುವರಿ ತೆರವಿಗೆ ಕ್ರಮವಹಿಸಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜಕಾಲುವೆ ಒತ್ತುವರಿ ಸಂಬAಧ ಸದಸ್ಯ ಬಷೀರ್ ಪ್ರಸ್ತಾಪಿಸಿದರು. ಅರ್ಧ ಗಂಟೆ ಮಳೆ ಸುರಿದರೆ ನಗರದ ಬಹುತೇಕ ಕಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುತ್ತಿರುವುದಕ್ಕೆ ರಾಜಕಾಲುವೆ ಒತ್ತುವರಿ ಕಾರಣವಾಗಿದೆ. ಹಲವು ಕಡೆ ಕಾಲುವೆಯ ಮೇಲೆ ಕಟ್ಟಡ ನಿರ್ಮಾಣವಾಗಿದೆ. ಇಂತವರ ವಿರುದ್ಧ ಸೂಕ್ತ ಕ್ರಮದ ಅವಶ್ಯಕತೆ ಇದೆ ಎಂದು ಗಮನ ಸೆಳೆದರು. ಇದರೊಂದಿಗೆ ನಗರಸಭೆಗೆ ಸೇರಿದ ಹಲವು ಜಾಗಗಳು ಒತ್ತುವರಿಯಾಗಿವೆ. ಈ ಹಿನ್ನೆಲೆ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಿ ನಗರಸಭೆಯ ಸುಪರ್ದಿಗೆ ತೆಗೆದುಕೊಳ್ಳುವ ಕೆಲಸವಾಗಬೇಕೆಂದು ತಿಳಿಸಿದರು.
ಸಭೆಗೆ ಆಗಮಿಸಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಈ ಸಂಬAಧ ಮಾತನಾಡಿ, ಮೊದಲು ರಾಜಕಾಲುವೆ ಸಂಬAಧಿಸಿದ ದಾಖಲೆಗಳನ್ನು ಸಮರ್ಪಕವಾಗಿ ಕ್ರೋಢೀಕರಿಸಿ ಯಾವುದೇ ಗೊಂದಲ ಉಂಟಾಗದAತೆ ಎಚ್ಚರಿಕೆವಹಿಸಬೇಕು. ಒತ್ತುವರಿಯಾಗಿರುವ ಜಾಗಗಳನ್ನು ಗುರುತಿಸಿ ಸರ್ವೆ ನಡೆಸಬೇಕು. ಬೆಂಗಳೂರಿನಲ್ಲಿ ಕಾಲುವೆಗಳ ಒತ್ತುವರಿಯಿಂದ ಭಾರೀ ಸಮಸ್ಯೆಗಳು ಉಂಟಾಗುತ್ತಿವೆ. ಅಲ್ಲಿನ ಪರಿಸ್ಥಿತಿ ಸೃಷ್ಟಿಯಾಗದಂತೆ ತಡೆಯಲು ಒತ್ತುವರಿ ತೆರವು ಆಗಬೇಕಾಗಿದೆ. ಭೂಕಬಳಿಕೆ ಪತ್ತೆಗೆ ಸರ್ವೆ ಕಾರ್ಯ ನಡೆಸಲು ಮುಂದಾಗುವAತೆ ಸೂಚಿಸಿದರು.
ಶಾಸ್ತಿçನಗರದಲ್ಲಿ ನಗರಸಭೆಯ ಜಾಗ ಒತ್ತುವರಿ ಮಾಡಿ ಅಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದರು. ಯಾವುದೇ ಕ್ರಮವಾಗಿಲ್ಲದ ಬಗ್ಗೆ ಸದಸ್ಯ ರಾಜೇಶ್ ಯಲ್ಲಪ್ಪ ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ವಿಜಯ, ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಕ್ರಮಕೈಗೊಳ್ಳಲಾಗುತ್ತಿಲ್ಲ ಎಂದು ತಿಳಿಸಿದರು.
ಆರಂಭದಲ್ಲಿಯೇ ವಾಗ್ವಾದ
ಕಾರ್ಯಸೂಚಿ ಅನ್ವಯ ಸಭೆ ನಡೆಯುತ್ತಿದ್ದಂತೆ ಸದಸ್ಯ ರಾಜೇಶ್ ಯಲ್ಲಪ್ಪ ನಗರದ ಸಮಸ್ಯೆಯನ್ನು ಪ್ರಶ್ನಿಸಿದರು.
(ಮೊದಲ ಪುಟದಿಂದ) ದಾಖಲೆ ಪಡೆಯಲು ವಿಳಂಬ, ಕಸ ವಿಲೇವಾರಿ ಅಸಮರ್ಪಕ ಕುರಿತು ಧ್ವನಿ ಎತ್ತಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಭೆ ಆರಂಭವಾದ ಕೆಲ ನಿಮಿಷ ವಾಗ್ವಾದದಿಂದ ಕೂಡಿತ್ತು.
ಮತ್ತೋರ್ವ ಸದಸ್ಯ ಮನ್ಸೂರ್ ಅಲಿ ಮಾತನಾಡಿ, ೭ ತಿಂಗಳ ಆಯವ್ಯಯ ಅನ್ನು ೨ ದಿನಗಳ ಹಿಂದೆ ಸದಸ್ಯರಿಗೆ ತಲುಪಿಸಿದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಇದಕ್ಕೆ ಅಮೀನ್ ಮೊಹ್ಸಿನ್ ಧ್ವನಿಗೂಡಿಸಿ ವಿರೋಧಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಆಯವ್ಯಯ ಸಂಬAಧ ವಿಶೇಷ ಸಭೆ ಕರೆದು ಚರ್ಚಿಸೋಣ ಎಂದು ಹೇಳಿದಾಗ ಸಭೆ ಆ ಕ್ಷಣಕ್ಕೆ ತಿಳಿಯಾಯಿತು.
ಸಿಬ್ಬಂದಿಗಳಿಗೆ ಪಾವತಿಯಾಗದ ವೇತನ
ನಗರಸಭೆಯ ಸಿಬ್ಬಂದಿ ಸೇರಿದಂತೆ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಅನೇಕರಿಗೆ ಕಳೆದ ೭ ತಿಂಗಳುಗಳಿAದ ಸಂಬಳ ಪಾವತಿಯಾಗದ ಬಗ್ಗೆ ಎಸ್.ಡಿ.ಪಿ.ಐ. ಸದಸ್ಯರುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅಧ್ಯಕ್ಷರ ಬೇಜವಾಬ್ದಾರಿಯಿಂದ ಈ ರೀತಿ ಆಗುತ್ತಿದೆ ಎಂದು ನೇರವಾಗಿ ಆರೋಪ ಮಾಡಿದರು. ಇದರಿಂದ ಸಭೆಯಲ್ಲಿ ವಾಗ್ವಾದ ಸೃಷ್ಟಿಯಾಯಿತು.
ಸಂಬಳ ಪಾವತಿಯಾಗದೆ ಇರುವುದರಿಂದ ಇಬ್ಬರು ಕೆಲಸ ಬಿಟ್ಟಿದ್ದಾರೆ. ಹಲವರು ಕೆಲಸ ಬಿಡಲು ಮುಂದಾಗಿದ್ದಾರೆ. ಅವರ ಬಗ್ಗೆ ಕಾಳಜಿ ತೋರುವಂತೆ ಮನ್ಸೂರ್ ಅಲಿ ಹಾಗೂ ಅಮೀನ್ ಮೊಹ್ಸಿನ್ ಹೇಳಿದಾಗ, ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಮೊದಲೇ ಟೆಂಡರ್ ಅವಧಿ ಮುಗಿದಿದ್ದ ಕಾರಣಕ್ಕಾಗಿ ಹೊರಗುತ್ತಿಗೆಯ ನೌಕರರಿಗೆ ಸಂಬಳ ಪಾವತಿಯಾಗಿಲ್ಲ. ಈ ಸಂಬAಧ ಈಗಾಗಲೇ ಪ್ರಕ್ರಿಯೆ ಪೂರ್ಣಗೊಳಿಸಿ ಸಂಬಳ ಪಾವತಿಯಾಗುವ ಹಂತದಲ್ಲಿದೆ. ಏನೂ ತಿಳಿಯದೆ ವೃತಾರೋಪ ಮಾಡದಂತೆ ಖಾರವಾಗಿ ನುಡಿದರು. ಶಾಸಕ ಅಪ್ಪಚ್ಚು ರಂಜನ್ ಮಧ್ಯಪ್ರವೇಶಿಸಿ ಸರಕಾರದ ಕೆಲಸ ಮಾಡುವಾಗ ಸಂಬಳ ಪಾವತಿಸಬೇಕು. ಈ ವಿಚಾರದಲ್ಲಿ ಸ್ವಲ್ಪ ತಡವಾಗಿದೆ. ಅದನ್ನು ಬಗೆಹರಿಸಲಾಗುವುದು ಎಂದರು.
ನಗರಸಭಾ ಅಧ್ಯಕ್ಷೆಗೆ ಕಳೆದ ೧೦ ತಿಂಗಳಿನಲ್ಲಿ ಮಾಸಿಕ ರೂ. ೨೫೦೦ ರಂತೆ ಫೋನ್ ಬಿಲ್ ಎಂದು ಒಟ್ಟು ರೂ. ೨೫ ಸಾವಿರ ಹಣ ಪಡೆದ ಬಗ್ಗೆ ಆಕ್ಷೇಪ ಕೇಳಿ ಬಂತು. ಇದು ಸರಕಾರದಿಂದ ನಿಗದಿಯಾಗಿರುವ ಹಣ ಅದನ್ನು ಪಡೆದುಕೊಂಡಿದ್ದೇನೆ ಎಂದು ಅನಿತಾ ಪೂವಯ್ಯ ಸಮರ್ಥಿಸಿಕೊಂಡರು. ಈ ಸಂದರ್ಭ ಎಸ್.ಡಿ.ಪಿ.ಐ. ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದವೇ ಸೃಷ್ಟಿಯಾಯಿತು.
ರಾಜೇಶ್ ಯಲ್ಲಪ್ಪ ನಗರಸಭೆಯ ವಾಹನಗಳಿಗೆ ಹಾಕುವ ಇಂಧನದಲ್ಲಿ ದೊಡ್ಡ ಅವ್ಯವಹಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಸಂದರ್ಭ, ಬಿಜೆಪಿ ಸದಸ್ಯರು ದಾಖಲೆ ಇಲ್ಲದೆ ಮಾತನಾಡಬೇಡಿ. ನಿಖರವಾಗಿ ಹೇಳುವಂತೆ ತಿಳಿಸಿದರು. ಈ ಸಂದರ್ಭ ರಾಜೇಶ್ ಯಲ್ಲಪ್ಪ ತನಗೆ ನೀಡಿರುವ ಕಳೆದ ೭ ತಿಂಗಳ ಮಾಹಿತಿ ಹಾಗೂ ಖರ್ಚಿನ ವಿವರದಲ್ಲಿ ಹೋಲಿಕೆ ಇಲ್ಲ. ಇದರಲ್ಲಿ ತಿಳಿಯುತ್ತದೆ ಎಂದು ಪ್ರತ್ಯುತ್ತರ ನೀಡಿದರು.
ಕಸವಿಲೇವಾರಿಗೆ ಕ್ರಮವಹಿಸಿ
ಮಡಿಕೇರಿಯ ಗುಡ್ಡದ ಮೇಲೆ ಸಂಗ್ರಹಣೆಗೊAಡಿರುವ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಶೀಘ್ರ ಕ್ರಮವಹಿಸಲು ಶಾಸಕ ರಂಜನ್ ನಿರ್ದೇಶಿಸಿದರು.
‘ಸಿಂಗಲ್ ಟೆಂಡರ್’ ಆದ ಕಾರಣ ಪ್ರಕ್ರಿಯೆ ತಡವಾಯಿತು. ಮತ್ತೊಮ್ಮೆ ಟೆಂಡರ್ ಆಹ್ವಾನಿಸಲಾಗುವುದು. ಆ ಮೂಲಕ ಶೀಘ್ರದಲ್ಲಿಯೇ ವಿಲೇವಾರಿ ಕಾರ್ಯ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ವಿಜಯ ಮಾಹಿತಿ ನೀಡಿದರು.
೩ನೇ ನಗರೋತ್ಥಾನದಡಿ ರೂ. ೪೦ ಕೋಟಿ ಮಂಜೂರಾಗಿದೆ. ಶೇ ೧೫ ಖರ್ಚಾದ ನಂತರ ಉಳಿಕೆ ಹಣ ಬಿಡುಗಡೆ ಮಾಡಲಾಗುತ್ತದೆ. ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ರೂ. ೧೩.೫೦ ಕೋಟಿಯ ಟೆಂಡರ್ ಆಗಿ ಅನುಮೋದನೆಯೂ ದೊರೆತಿದೆ ಎಂದು ವಿಜಯ ವಿವರಿಸಿದರು.
ಕಳೆದ ಬಾರಿಯ ರೂ. ೫ ಕೋಟಿ ಅನುದಾನ ಬಾಕಿ ಉಳಿದಿದ್ದು, ಅದನ್ನು ಮಹದೇವಪೇಟೆ ರಸ್ತೆಯ ಅಭಿವೃದ್ಧಿಗೆ ವಿನಿಯೋಗಪಡಿಸಲು ಅಮೀನ್ ಮೊಹ್ಸಿನ್ ಕೋರಿದರು. ಇದಕ್ಕೆ ಉಪಾಧ್ಯಕ್ಷೆ ಸವಿತಾ ರಾಕೇಶ್ ಕೂಡ ಪೂರಕವಾಗಿ ಮಾತನಾಡಿ, ತೀರ ಹದಗೆಟ್ಟ ಈ ರಸ್ತೆಯನ್ನು ಸರಿಪಡಿಸಲು ಸೂಕ್ತ ಕ್ರಮವಹಿಸಬೇಕಾಗಿದೆ ಎಂದು ಶಾಸಕರ ಗಮನಕ್ಕೆ ತಂದರು. ಶಾಸಕರು ಟೆಂಡರ್ ಕರೆದು ಕಾಮಗಾರಿ ಆರಂಭಿಸುವAತೆ ಹೇಳಿದರು. ಮಡಿಕೇರಿಯಲ್ಲಿ ೧೨೦೦ ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ, ಇನ್ನೂ ನಿವೇಶನ ದೊರಕದ ಬಗ್ಗೆ ಅಮೀನ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮಡಿಕೇರಿ ಹೊರವಲಯದಲ್ಲಿ ೩ ಎಕರೆ ಜಾಗ ಗುರುತಿಸಲಾಗಿದೆ ಎಂದರು.
ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ರಾಸಾಯನಿಕ ಪದಾರ್ಥಗಳು ಪೋಲಾಗುತ್ತಿವೆ. ಇದರಿಂದ ಹಣ ನಷ್ಟವಾಗುತ್ತಿದೆ. ಇದನ್ನು ತಡೆಯಲು ಸದಸ್ಯರ ತಂಡ ರಚನೆ ಮಾಡಬೇಕಾಗಿದೆ. ಅವರು ಇದರ ಮೇಲ್ವಿಚಾರಣೆ ನಡೆಯಬೇಕೆಂದು ಸಲಹೆ ನೀಡಿದರು. ರಾಸಾಯನಿಕ ಸಾಮಗ್ರಿಗಳ ವಾರ್ಷಿಕ ಇ-ಟೆಂಡರ್ ಬಳಿಕ ಅದನ್ನು ನಗರಸಭಾ ಸದಸ್ಯರ ೫ ಜನರ ತಂಡ ಮೇಲ್ವಿಚಾರಣೆ ಮಾಡಲು ತೀರ್ಮಾನಿಸಲಾಯಿತು.
ಇತ್ತೀಚಿಗೆ ನಗರಸಭೆಯಲ್ಲಿ ನಮೂನೆ ೩ ಸೇರಿದಂತೆ ಇನ್ನಿತರ ದಾಖಲೆ ಪಡೆಯುವ ನಿಟ್ಟಿನಲ್ಲಿ ಹರಸಾಹಸ ಪಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಹೊಸ ನೀತಿಯಿಂದ ಜನರಿಗೆ ಸಮಸ್ಯೆಯಾಗಿದೆ ಎಂದು ಸದಸ್ಯ ಅರುಣ್ ಶೆಟ್ಟಿ ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ತೆರಿಗೆ ಪಾವತಿಸದವರನ್ನು ಪತ್ತೆಹಚ್ಚಲು ಹಾಗೂ ತೆರಿಗೆ ಸಂಗ್ರಹಿಸಲು ಈ ಕ್ರಮಕೈಗೊಳ್ಳಲಾಗಿದೆ. ಇದರಿಂದ ನಗರಸಭೆಗೆ ಲಾಭವಾಗುತ್ತಿದೆ. ಕೆಲವೊಂದು ಗೊಂದಲದ ಪ್ರಕರಣಗಳಲ್ಲಿ ಕೆಲವೊಂದು ದಾಖಲೆಗಳನ್ನು ಕೇಳುತ್ತಿದ್ದೇವೆ ಹೊರತು ಎಲ್ಲರಲ್ಲೂ ಕೇಳುತ್ತಿಲ್ಲ ಎಂದು ಸಮಜಾಯಿಷಿಕೆ ನೀಡಿದರು.
ಮಾರುಕಟ್ಟೆ ಪ್ರಾಂಗಣದಲ್ಲಿ ವಾಹನ ನಿಲುಗಡೆ ಮಾಡದಂತೆ, ದೊಡ್ಡಿ ಜಾಗ ಪರಿಶೀಲಿಸಿ ದೊಡ್ಡಿ ನಿರ್ಮಿಸುವಂತೆ, ಮಾರುಕಟ್ಟೆ ಆವರಣದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲು, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನೀಡುವ ಸಹಾಯಧನಕ್ಕೆ ಅರ್ಹರ ಅರ್ಜಿಯನ್ನು ಮರು ಆಹ್ವಾನಿಸಲು, ೯೪ಸಿ ಅರ್ಜಿಗೆ ನೀಡುವ ನಿರಾಪೇಕ್ಷಣಾ ಪತ್ರಕ್ಕೆ ಆ ವ್ಯಾಪ್ತಿಯ ಸದಸ್ಯರ ಸಹಿ ಪಡೆಯಲು ಸೇರಿದಂತೆ ಇನ್ನಿತರ ವಿಚಾರಗಳನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು.
ಬೀದಿ ಬದಿ ವ್ಯಾಪಾರಿಗಳ ಜಿಲ್ಲಾ ಮಟ್ಟದ ಸಮಿತಿಗೆ ನಗರಸಭೆ ಸದಸ್ಯ ಚಂದ್ರಶೇಖರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಎಲ್ಲಾ ನಗರಸಭಾ ಸದಸ್ಯರುಗಳು ಹಾಜರಿದ್ದರು.