ಗೋಣಿಕೊಪ್ಪಲು, ನ. ೧೭: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರಗುಪ್ಪೆ - ವಿ.ಬಾಡಗ ರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣಕ್ಕೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು. ಈ ಹಿಂದೆ ಈ ರಸ್ತೆಯು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ಇದನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಲೋಕೋಪಯೋಗಿ ಇಲಾಖೆಗೆ ಉನ್ನತೀಕರಣಗೊಳಿಸಿ ೧ ಕೋಟಿ ಅನುದಾನವನ್ನು ಮೊದಲ ಹಂತದಲ್ಲಿ ಬಿಡುಗಡೆ ಗೊಳಿಸಿದ್ದರು. ಈ ಅನುದಾನದಿಂದ ರಸ್ತೆ ಅಭಿವೃದ್ಧಿ ಆಗುತ್ತಿದ್ದು, ಈ ಭಾಗದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಕ್ಷೇತ್ರದ ಉದ್ದಗಲಕ್ಕೂ ನಿರೀಕ್ಷೆಗೂ ಮೀರಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ. ಮುಂದೆಯೂ ಮುಖ್ಯಮಂತ್ರಿಗಳ ಬಳಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದೇನೆ. ಅನುದಾನ ಲಭಿಸುವ ವಿಶ್ವಾಸವಿದೆ. ಕಳೆದ ಮಳೆಯಲ್ಲಿ ಆದ ಸಮಸ್ಯೆಯಿಂದಾಗಿ ಕ್ಷೇತ್ರದ ರಸ್ತೆಗಳು ಹಾಳಾಗಿದ್ದವು. ಇದನ್ನು ದುರಸ್ತಿ ಪಡಿಸಲು ಈಗಾಗಲೇ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಆಗಿಂದ್ದಾಗೆ ವರುಣನ ದರ್ಶನವಾಗುತ್ತಿರುವುದರಿಂದ ರಸ್ತೆ ಕಾಮಗಾರಿ ನಡೆಸಲು ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ರಸ್ತೆ ಅಭಿವೃದ್ಧಿಯ ಕಾಮಗಾರಿ ತ್ವರಿತಗತಿಯಲ್ಲಿ ಸಾಗಲಿದೆ. ಸಾರ್ವಜನಿಕ ವಲಯದಲ್ಲಿ ರಸ್ತೆ ದುಸ್ಥಿತಿ ಬಗ್ಗೆ ಮಾತನಾಡಿಕೊಳ್ಳುತ್ತಿರುವ ಬಗ್ಗೆ ಯಾರೂ ಧೃತಿಗೆಡಬೇಕಾಗಿಲ್ಲ. ಸಾಕಷ್ಟು ಅನುದಾನವೂ ಈಗಾಗಲೇ ಲೋಕೋಪಯೋಗಿ ಇಲಾಖೆಯಲ್ಲಿ ಲಭ್ಯವಾಗಿದ್ದು ಹಲವು ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಗಳು ಮುಗಿದಿವೆ. ಕೆಲಸಗಳು ಆರಂಭವಾಗಲಿವೆ ಎಂದು ಹೇಳಿದರು.

ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ವ್ಯಾಪ್ತಿಗೆ ಈಗಾಗಲೇ ೧೦ಕೋಟಿಗೂ ಅಧಿಕ ಅನುದಾನವನ್ನು ವಿವಿಧ ಹಂತದಲ್ಲಿ ಬಿಡುಗಡೆಗೊಳಿಸಲಾಗಿದ್ದು ರಸ್ತೆ, ಚೆಕ್‌ಡ್ಯಾಂ ಸೇರಿದಂತೆ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಸಾರ್ವಜನಿಕರು ರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣ ಸಂದರ್ಭ ಸಹಕರಿಸಬೇಕೆಂದು ಮನವಿ ಮಾಡಿದರು.

ತಾಲೂಕು ಬಿಜೆಪಿ ಕಾರ್ಯದರ್ಶಿ ಅಮ್ಮುಣಿಚಂಡ ರಂಜಿ ಮಾತನಾಡಿ ಕ್ಷೇತ್ರದ ಶಾಸಕರು ನಿರೀಕ್ಷೆಗೂ ಮೀರಿ ಗ್ರಾಮಕ್ಕೆ ಅನುದಾನವನ್ನು ಒದಗಿಸಿದ್ದಾರೆ. ಇದರಿಂದ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಆದ್ಯತೆ ಮೇರೆ ಗ್ರಾಮದ ಹಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಶಾಸಕರಿಗೆ ಮನವಿ ಮಾಡಲಾಗಿದೆ. ಕಾರ್ಯಕರ್ತರು ಅಭಿವೃದ್ಧಿಯ ವಿಚಾರದಲ್ಲಿ ಜನತೆಗೆ ವಿಚಾರ ತಿಳಿಸುವಂತೆ ಮನವಿ ಮಾಡಿದರು.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಮೂಕಚಂಡ ಪ್ರಸನ್ನ ಸುಬ್ಬಯ್ಯ ಮಾತನಾಡಿ ಈ ಭಾಗದ ಅಭಿವೃದ್ಧಿ ಬಗ್ಗೆ ಶಾಸಕರು ಕಾಳಜಿ ವಹಿಸಿರುವುದನ್ನು ಸ್ಮರಿಸಿದರು. ಒಳ ರಸ್ತೆಗಳಿಗೆ ಅನುದಾನದ ಬೇಡಿಕೆಯನ್ನು ಶಾಸಕರ ಮುಂದೆ ಇಡಲಾಗಿದೆ. ಮುಂದಿನ ದಿನದಲ್ಲಿ ಅನುದಾನ ಲಭಿಸುವ ಭರವಸೆ ಇದೆ ಎಂದರು.

ಈ ವೇಳೆ ಶಕ್ತಿ ಕೇಂದ್ರದ ಪ್ರಮುಖ್ ಅಪ್ಪಂಡೇರAಡ ದಿನು, ಸಹ ಪ್ರಮುಖ್ ಕುಪ್ಪಂಡ ದಿಲನ್, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯ, ಸದಸ್ಯ ಕಂಜಿತAಡ ಉತ್ತಪ್ಪ, ನಾಯಡ ಬೋಪಣ್ಣ, ಜನಿತ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಬಿಜೆಪಿ ಬೂತ್ ಅಧ್ಯಕ್ಷ ಮೋಹನ್, ಪ್ರಮುಖ ಕಂಜಿತAಡ ಮಂದಣ್ಣ, ಗುತ್ತಿಗೆದಾರ ಸುಬ್ಬಯ್ಯ, ಯು.ಐ. ಸವಿತ ನಾಣಯ್ಯ, ಹರೀಶ್‌ಗೌಡ, ಲೋಕೋಪಯೋಗಿ ಇಲಾಖೆಯ ಎಇಇ ಸಿದ್ದೇಗೌಡ, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.