ಗೋಣಿಕೊಪ್ಪಲು, ನ. ೧೬: ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ಗೋಣಿಕೊಪ್ಪಲು ವಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಪ್ರಗತಿ ಆಟೋ ಚಾಲಕರ, ಮಾಲೀಕರ ಸಂಘದ ಅಧ್ಯಕ್ಷ ಮಲ್ಲಂಡ ಪ್ರಕಾಶ್ ಅಧ್ಯಕ್ಷತೆಯಲ್ಲಿ ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳು ಮೂಡಿಬಂದವು.

ಸAಜೆ ನಡೆದ ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಕನ್ನಡ ಭಾಷೆಗೆ ಮುಂದಿನ ದಿನದಲ್ಲಿ ಬಹಳ ದೊಡ್ಡ ಸವಾಲಿದೆ, ೨೦೨೨ರ ಇಸವಿಯ ಒಳಗೆ ಕನ್ನಡ ಭಾಷೆಯೇ ಬಳಕೆ ಕ್ಷೀಣಿಸಲಿದೆ. ಈ ಬಗ್ಗೆ ವೈಜ್ಞಾನಿಕವಾಗಿ ಹಲವಾರು ವರದಿಗಳನ್ನು ನೋಡಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಭಾಷೆಯನ್ನು ಉಳಿಸುವ ಪ್ರಯತ್ನ ಕನ್ನಡ ಪ್ರೇಮಿಗಳಿಂದ ಆಗಬೇಕಾಗಿದೆ. ಕನ್ನಡ ಭಾಷೆಯ ರಕ್ಷಣೆಗಾಗಿ ರಾಜ್ಯೋತ್ಸವ ಕಾರ್ಯಕ್ರಮ ಅವಶ್ಯ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಮಾತನಾಡುವ ಇಂಗ್ಲಿಷ್ ಭಾಷೆ ಎಂಬ ಭ್ರಮೆಯಿದೆ. ಆದರೆ ಪ್ರಪಂಚದಲ್ಲಿ ಮ್ಯಾಂಡ್ರಿAಗ್ ಭಾಷೆ ಪ್ರಥಮ ಸ್ಥಾನದಲ್ಲಿದೆ. ಅದು ಚೈನಾದಲ್ಲಿದೆ. ಕನ್ನಡ ಭಾಷೆ ಪ್ರಪಂಚದಲ್ಲಿ ೨೨ನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಅವಶ್ಯಕತೆಗೆ ಅನುಗುಣವಾಗಿ ಇಂಗ್ಲಿಷ್ ಭಾಷೆ ಬಳಸಬೇಕು ವಿನಃ ಉಳಿದ ಎಲ್ಲಾ ಕಾರ್ಯಗಳಿಗೂ ಕನ್ನಡ ಭಾಷೆ ಬಳಸಬೇಕು. ಅನ್ನದ ಭಾಷೆಯನ್ನು ಉಳಿಸುವ, ಬೆಳೆಸುವುದು ಪ್ರತಿಯೋರ್ವನ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು.

ಪ್ರಗತಿ ಆಟೋ ಚಾಲಕರ, ಮಾಲೀಕರ ಸಂಘದ ಅಧ್ಯಕ್ಷ ಮಲ್ಲಂಡ ಪ್ರಕಾಶ್ ಮಾತನಾಡಿದರು.

ಉದ್ಯಮಿ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ, ಪ್ರಗತಿ ಆಟೋ ಸಂಘ ವಿಭಿನ್ನ ಕಾರ್ಯಕ್ರಮದ ಮೂಲಕ ಭಾಷೆ ಉಳಿವಿಗೆ ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಡಾ. ಜೆ. ಸೋಮಣ್ಣ, ಸಂತ ಥೋಮಸ್ ಶಾಲೆಯ ರೆ. ಫಾದರ್ ಪ್ರಾನ್ಸಿಸ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವಕಾಮತ್, ಹೋಬಳಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ, ಪ್ರಮುಖರಾದ ತಮ್ಲಿಕ್ ದಾರಮಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಸಮಾಜ ಸೇವಕರಾದ ಉಂಬಾಯಿ ಹಾಗೂ ಕಾಡಾನೆ ದಾಳಿ ಸಂದರ್ಭ ಮಗುವಿನ ಪ್ರಾಣ ರಕ್ಷಿಸಿದ ಆಟೋ ಚಾಲಕ ಅಬ್ದುಲ್ ಲತೀಫ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಚನ್ನನಾಯಕ್ ನಿರೂಪಿಸಿ, ಆಟೋ ಸಂಘದ ಪ್ರಧಾನ ಕಾರ್ಯದರ್ಶಿ ಡಾಡು ಜೋಸೆಫ್ ಸ್ವಾಗತಿಸಿ, ವಂದಿಸಿದರು. ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗೋಣಿಕೊಪ್ಪಲುವಿನ ಸೈಕ್ಲೋನ್ ತಂಡ ಪ್ರಥಮ ಸ್ಥಾನ, ವೀರಾಜಪೇಟೆ ನಾಟ್ಯಾಂಜಲಿ ದ್ವಿತೀಯ ಸ್ಥಾನ, ಪೊನ್ನಂಪೇಟೆ ಯುವತಿ ಮಂಡಳಿ ತೃತೀಯ ಸ್ಥಾನ ಪಡೆಯಿತು.