*ಗೋಣಿಕೊಪ್ಪ, ನ. ೧೬: ಜೀವ ರಕ್ಷಕ ಟ್ರಸ್ಟ್, ಮೈಸೂರು ರೋಟರಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಹಯೋಗದಲ್ಲಿ ತಾ. ೧೯ ರಂದು ಜಿಲ್ಲೆಯಲ್ಲಿ ಹೆಲ್ಮೆಟ್ ಮತ್ತು ಸೀಟ್ಬೆಲ್ಟ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮುವ್ಮೆಂಟ್ ಖಜಾಂಚಿ ಡಾ. ಚಂದ್ರಶೇಖರ್ ತಿಳಿಸಿದ್ದಾರೆ.
ರಸ್ತೆ ಸುರಕ್ಷತೆ ಜಾಗೃತಿ ಮೂಲ ಉದ್ದೇಶವಾಗಿದ್ದು, ಅಂದು ಬೆಳಿಗ್ಗೆ ೧೧ ಗಂಟೆಗೆ ಬೈಕಾಥಾನ್ ಮೂಲಕ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಜಾಗೃತಿ ನಡೆಯಲಿದೆ. ನಂತರ ವೀರಾಜಪೇಟೆ, ಮಡಿಕೇರಿ, ಕುಶಾಲನಗರಲ್ಲಿ ಜಾಗೃತಿ ಮೂಡಿಸಲಾಗುವುದು. ಈ ಸಂದರ್ಭ ಬೀದಿ ನಾಟಕ, ಹೆಲ್ಮೇಟ್ ವಿತರಣೆ, ಬೈಕಾಥಾನ್, ವಿಂಟೇಜ್ ಕಾರುಗಳ ಮೂಲಕ ನಡೆಯಲಿದೆ ಎಂದು ಸುದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
೨೦೧೮ರಲ್ಲಿ ಜೀವ ರಕ್ಷಕ ಟ್ರಸ್ಟ್ ಮೂಲಕ ಜಾಗೃತಿ ಮೂಡಿಸಲಾಗಿತ್ತು. ರಸ್ತೆ ಸುರಕ್ಷತೆ, ಪ್ರಥಮ ಚಿಕಿತ್ಸೆ, ಗಾಯಗೊಂಡ ರೋಗಿಯ ಚಿಕಿತ್ಸೆ, ತಲೆಗೆ ಪೆಟ್ಟಾದಾಗ, ಕುತ್ತಿಗೆಗೆ ಪೆಟ್ಟಾದಾಗ, ತೀವ್ರ ರಕ್ತಸ್ರಾವ, ಮೂಳೆ ಮುರಿತ, ಜಜ್ಜಿದ ಗಾಯ, ಮೂರ್ಚೆ ಹೋಗುವುದು, ಸುಟ್ಟಗಾಯ ಸಂದರ್ಭ ಯಾವ ರೀತಿ ಮುಂಜಾಗ್ರತೆ ಮೂಲಕ ಚಿಕಿತ್ಸೆ ನೀಡಬೇಕಿದೆ ಎಂಬ ಅರಿವು ಮೂಡಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಕಾರ್ಯಕ್ರಮ ವ್ಯವಸ್ಥಾಪಕಿ ಕೆ.ಕೆ. ಕುಸುಮ ಇದ್ದರು.