ಚೆಟ್ಟಳ್ಳಿ, ನ. ೧೬: ಕೇಂದ್ರ ಸರಕಾರದ ಸ್ವಚ್ಛತಾ ಪಖ್ವಾಡ ಅಭಿಯಾನದಡಿ ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಕಂಡಕರೆ ಪ್ರಾಥಮಿಕ ಶಾಲೆಯಿಂದ ಚೆಟ್ಟಳ್ಳಿ ಪಟ್ಟಣದವರೆಗೆ ಕಾಫಿ ಮಂಡಳಿಯ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರ ಆಯೋಜಿಸಿರುವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಹಾಗೂ ಕಂಡಕರೆ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ವಾಹನದಲ್ಲಿ ರಸ್ತೆಬದಿಯ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲಾಯಿತು. ಶಾಲಾ ಮಕ್ಕಳು ಪ್ಲಾಸ್ಟಿಕ್ ತ್ಯಜಿಸಿ ಭೂಮಂಡಳ ಉಳಿಸಿ, ಕಸವನ್ನು ಕಸದ ತೊಟ್ಟಿಗೆ ಹಾಕಿ ಎಂಬ ಘೋಷಣೆಯನ್ನು ಕೂಗುವ ಮೂಲಕ ಸ್ವಚ್ಛತೆಯ ಬಗ್ಗೆ ಸಾರ್ವಜಕರಲ್ಲಿ ಅರಿವು ಮೂಡಿಸಿದರು.

ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದ ಉಪನಿರ್ದೇಶಕ ಡಾ. ಚಂದ್ರಪ್ಪ, ಕೀಟ ತಂತ್ರಜ್ಞ ಡಾ. ಮಂಜುನಾಥ್ ರೆಡ್ಡಿ, ಬೇಸಾಯ ವಿಜ್ಞಾನಿಗಳಾದ ಮುಖಾರಿಬ್ ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ.ಆರ್. ವಿಮಲಾಕ್ಷಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಈ ಸಂದರ್ಭ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಪಂಚಾಯಿತಿ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.