ಕುಶಾಲನಗರ, ನ. ೧೫: ಹನುಮ ಜಯಂತಿ ಉತ್ಸವ ಅಂಗವಾಗಿ ಹನುಮ ಜಯಂತೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಡಿಸೆಂಬರ್ ೫ ರಂದು ಅದ್ಧೂರಿಯ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಶೋಭಾಯಾತ್ರೆಯಲ್ಲಿ ಕುಶಾಲನಗರ, ಮುಳ್ಳುಸೋಗೆ, ಬೈಚನಹಳ್ಳಿ, ಮಾದಪಟ್ಟಣ, ಗುಡ್ಡೆಹೊಸೂರು ಗ್ರಾಮಗಳಿಂದ ವಿದ್ಯುತ್ ಅಲಂಕೃತ ಭವ್ಯ ಮಂಟಪಗಳು ಪಾಲ್ಗೊಳ್ಳಲಿವೆ. ಸಂಜೆ ೬ ಗಂಟೆಗೆ ಆಯಾ ಗ್ರಾಮಗಳಿಂದ ಹೊರಟು ರಾತ್ರಿ ೮.೩೦ಕ್ಕೆ ಎಲ್ಲಾ ಮಂಟಪಗಳು ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಸೇರಿ ನಂತರ ಬೈಚನಹಳ್ಳಿ ಮಾರಿಯಮ್ಮ ದೇವಾಲಯ ತನಕ ಸಾಗಲಿವೆ ಎಂದು ಹೇಳಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎನ್ ದೇವರಾಜ್, ಅಲಂಕೃತ ಮಂಟಪಗಳಿಗೆ ಬಹುಮಾನ ನೀಡುವ ಸಂಬAಧ ತೀರ್ಪುಗಾರರ ತಂಡ ರಚನೆ ಮಾಡಲಾಗುವುದು, ನಂತರ ಆಯ್ಕೆಯಾದ ಮಂಟಪಗಳಿಗೆ ಪ್ರಥಮ, ದ್ವಿತೀಯ, ತೃತೀಯ ಸೇರಿದಂತೆ ಪಾಲ್ಗೊಂಡ ಎಲ್ಲಾ ಮಂಟಪಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.ಈ ಸಂದರ್ಭ ಅಂದಾಜು ೧೦ ರಿಂದ ೧೫ ಸಾವಿರ ಭಕ್ತಾದಿಗಳು ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.

ಗೋಷ್ಟಿಯಲ್ಲಿ ಕಮಿಟಿಯ ಉಪಾಧ್ಯಕ್ಷರಾದ ಶಿವಶಂಕರ್, ಟಿ.ಎಲ್ ಜಗದೀಶ್, ಖಚಾಂಜಿ ಗಿರಿ, ಸದಸ್ಯರಾದ ಡಿ.ಸಿ ಮಂಜುನಾಥ್, ಹಿಂದೂ ಜಾಗರಣಾ ವೇದಿಕೆ ಶ್ರೀ ರಾಮದೂತ ಆಚರಣಾ ಸಮಿತಿ, ವೀರಾಂಜನೇಯ ಸೇವಾ ಸಮಿತಿ, ಬಸವೇಶ್ವರ ಯುವಕ ಸಂಘ, ಮಾರಿಯಮ್ಮ ದೇವಸ್ಥಾನ ಸಮಿತಿ, ಕಾಳಿಕಾಂಬ ದೇವಸ್ಥಾನ ಸಮಿತಿ, ಗಜಾನನ ಯುವಕ ಸಂಘ, ಮಂಟಪಗಳ ಪ್ರಮುಖರು ಇದ್ದರು.