ಕೂಡಿಗೆ, ನ. ೧೫: ತೋಟಗಾರಿಕಾ ಇಲಾಖೆ ವತಿಯಿಂದ ಮಾಹಿತಿ ಕಾರ್ಯಾಗಾರ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾರುಕಟ್ಟೆ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೃಷಿ ವಿಜ್ಞಾನ ಕೇಂದ್ರ ತೋಟಗಾರಿಕಾ ವಿಭಾಗದ ಮುಖ್ಯಸ್ಥ ಡಾ. ಪ್ರಭಾಕರ್ ಅವರು ತೋಟಗಾರಿಕೆ ಹಾಗೂ ಫಲಪುಷ್ಪ, ಸುಗಂಧ ದ್ರವ್ಯ ಕೃಷಿ ಹಾಗೂ ವಾಣಿಜ್ಯ ಬೆಳೆ ಅದರ ಸಾಧಕ ಬಾಧÀಕಗಳು ಹಾಗೂ ಮಾರುಕಟ್ಟೆ ವ್ಯವಸ್ಥೆ ಹಾಗೂ ಕೊಡಗು ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ ಧ್ಯೇಯ ಉದ್ದೇಶ ಹಾಗೂ ಅಲ್ಲಿ ಸಿಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಮುಖ್ಯ ಉಪನ್ಯಾಸಕ ಡಾ. ವೀರೇಂದ್ರ ಕುಮಾರ್ ಅವರು ಸಸ್ಯ ಸಂರಕ್ಷಣೆ ಸಸ್ಯಗಳಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ ಬಗ್ಗೆ ಸಮರ್ಪಕವಾದ ಮಾಹಿತಿಯನ್ನು ನೀಡಿದರು. ರೈತರು ಕಡ್ಡಾಯವಾಗಿ ರಸ ಗೊಬ್ಬರವನ್ನು ಬಳಸುವ ಮುನ್ನ ಮಣ್ಣು ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಕುರುಡು ಪದ್ಧತಿಯಲ್ಲಿ ವ್ಯವಸಾಯ ಮಾಡುವುದರಿಂದ ಬೆಳೆ ಹಾನಿಗೊಳಾಗುತ್ತದೆ ಹಾಗೂ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಅವಶ್ಯ ಇರುವ ಗೊಬ್ಬರವಷ್ಟೇ ಮಣ್ಣು ಪರೀಕ್ಷೆಯ ನಂತರ ಶಿಫಾರಸ್ಸು ಪ್ರಮಾಣದಲ್ಲಿ ಗಿಡಗಳಿಗೆ ಹಾಕಬೇಕು ಎಂದು ಕರೆ ನೀಡಿದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳ ಪ್ರಕಾಶ್, ತಾಲೂಕು ಸಹಾಯಕ ನಿರ್ದೇಶಕ ಮಂಜುನಾಥ ಶೆಟ್ಟಿ, ಕಾವ್ಯ, ತಾಲೂಕು ಜಿಲ್ಲಾ ಮಟ್ಟದ ತೋಟಗಾರಿಕಾ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಹಾಜರಿದ್ದರು.