ಗೋಣಿಕೊಪ್ಪಲು, ನ. ೧೫: ಬುಡಕಟ್ಟು ಕೃಷಿಕರ ಸಂಘ, ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ಹಾಡಿ ಅರಣ್ಯ ಹಕ್ಕು ಸಮಿತಿ ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಇವರ ವತಿಯಿಂದ ತಿತಿಮತಿಯ ಸಮುದಾಯ ಭವನದಲ್ಲಿ ಆದಿವಾಸಿ ಸ್ವಾತಂತ್ರö್ಯ ಹೋರಾಟಗಾರ ಬಿರ್ಸಾಮುಂಡಾ ಅವರ ೧೪೭ನೇ ಜಯಂತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಆದಿವಾಸಿ ಮುಖಂಡ ಪಿ.ಸಿ.ರಾಮು ಅಧ್ಯಕ್ಷತೆಯಲ್ಲಿ ತಿತಿಮತಿಯ ಮರೂರು ಆಶ್ರಮ ಶಾಲೆಯ ಆವರಣದಲ್ಲಿ ಹಿರಿಯರಾದ ಜಂಗಲಾಡಿಯ ಪಿ.ಸಿ.ಮಾದ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಪದಾಧಿಕಾರಿಗಳಾದ ರಾಯ್ ಮಾದಪ್ಪ, ವನವಾಸಿ ಕಲ್ಯಾಣದ ಕಾರ್ಯದರ್ಶಿ ಪಡಿಂಞರAಡ ಪ್ರಭು ಕುಮಾರ್, ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ಶಿಕ್ಷಕರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಮೆರವಣಿಗೆಯು ತಿತಿಮತಿ ಬಸ್ ನಿಲ್ದಾಣದವರೆಗೂ ಸಾಗಿ ನಂತರ ಸಮುದಾಯ ಭವನದಲ್ಲಿ ಸಮಾಗಮಗೊಂಡಿತು.

ಸಮಿತಿಯ ಹಿರಿಯರಾದ ಮಣಿಕುಂಞ ಪ್ರಾಸ್ತಾವಿಕವಾಗಿ ಮಾತನಾಡಿ, ಬಿರ್ಸಾ ಮುಂಡಾ ಅವರ ಜಯಂತಿ ಅಂಗವಾಗಿ ಸಮುದಾಯದ ಬಾಂಧವರು ಒಂದೆಡೆ ಸೇರುವ ಪ್ರಯತ್ನ ಯಶಸ್ವಿಯಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೊನ್ನಂಪೇಟೆ ಆಶ್ರಮದ ಸ್ವಾಮೀಜಿಗಳಾದ ತತ್ವರೂಪನಂದಾ ಅವರು ಬಿರ್ಸಾ ಮುಂಡಾ ಅವರ ಆದರ್ಶ ಗುಣಗಳನ್ನು ಮೈಗೂಡಿಸಿ ಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ಗಿರಿಜನರ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಹಕ್ಕು ಪತ್ರ, ವಾಸಕ್ಕಾಗಿ ಮನೆ ಇನ್ನೂ ಕೂಡ ಸಂಪೂರ್ಣವಾಗಿ ಬಡ ಕುಟುಂಬಗಳಿಗೆ ತಲುಪಿಲ್ಲ, ಹೋರಾಟ ಮೂಲಕವೇ ನಮ್ಮ ಹಕ್ಕುಗಳನ್ನು ಪಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಸಿ.ರಾಮು ಸಮುದಾಯದ ಬಾಂಧವರು ಒಂದೆಡೆ ಸೇರುವ ಮೂಲಕ ಒಗ್ಗಟ್ಟು ಬೆಳೆಸಿಕೊಳ್ಳಬೇಕು. ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗಿದೆ, ಇನ್ನಷ್ಟು ಸಮುದಾಯದ ಸಾಧಕರನ್ನು ಗುರುತಿಸುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.

ಬಿರ್ಸಾಮುAಡಾ ಜಯಂತಿ ಬಗ್ಗೆ ಡಾ.ಜೆ.ಸೋಮಣ್ಣ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ್ ಕಾಮತ್ ಮಾತನಾಡಿ ಆದಿವಾಸಿಗಳ ಬದುಕಿಗೆ ಬಿರ್ಸಾ ಮುಂಡಾ ಅವರ ಕೊಡುಗೆ ಅಪಾರ ಎಂದರು. ಗಿರಿಜನ ಕಲ್ಯಾಣ ಅಧಿಕಾರಿಗಳಾದ ಗುರುಶಾಂತಪ್ಪ ಮಾತನಾಡಿ ಆದಿವಾಸಿಗಳ ಕಲ್ಯಾಣಕ್ಕಾಗಿ ಇಲಾಖೆಯು ಸದಾ ಶ್ರಮಿಸುತ್ತಿದೆ. ಇಲಾಖೆಯ ಪ್ರಯೋಜನ ಪ್ರತಿ ಕುಟುಂಬಕ್ಕೂ ತಲುಪಬೇಕು ಎಂದರು.

ಅರಣ್ಯ ಮಹಾವಿದ್ಯಾಲಯದ ಪ್ರೊ.ಡಾ.ಜಡೇಗೌಡ ಮಾತನಾಡಿ, ಗಿರಿಜನ ಸಮುದಾಯ ಶಿಕ್ಷಣದಿಂದ ವಂಚಿತರಾಗದAತೆ ಎಚ್ಚರಿಕೆ ವಹಿಸಬೇಕು ಎಂದರು. ಬುಡಕಟ್ಟು ಹೋರಾಟಗಾರ ಬಸಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಿ.ಆರ್.ಪಂಕಜ ಸೇರಿದಂತೆ ಆದಿವಾಸಿಗಳ ಮುಖಂಡರಾದ ನಾಗರಹೊಳೆ ಜೆ.ಕೆ.ತಿಮ್ಮ, ಮಾಲ್ದಾರೆಯ ಸಿದ್ದಪ್ಪ, ದಸಂಸ ಜಿಲ್ಲಾ ಸಂಚಾಲಕ ಹೆಚ್.ಆರ್.ಪರಶುರಾಮ, ಲ್ಯಾಂಪ್ ಸೊಸೈಟಿಯ ಉಪಾಧ್ಯಕ್ಷರಾದ ಜೆ.ಆರ್.ಪುಷ್ಪ ಸೇರಿದಂತೆ ಅನೇಕ ಗಣ್ಯರು ಮಾತನಾಡಿದರು.

ತಿತಿಮತಿ ಗ್ರಾ.ಪಂ.ಅಧ್ಯಕ್ಷೆÀ ಕೆ.ಸರಸ್ವತಿ, ದೇವರಪುರ ಗ್ರಾ.ಪಂ.ಅಧ್ಯಕ್ಷೆ ಪಿ.ಜೆ.ಶಾರದ, ಮಾಯಮುಡಿ ಗ್ರಾ.ಪಂ. ಅಧ್ಯಕ್ಷೆ ಎಂ.ಪಿ.ಮೀನಾ, ಆದಿವಾಸಿ ಮುಖಂಡರಾದ ಪಿ.ಎಂ.ಚುಬ್ರು, ರವಿ, ಸೋಮಯ್ಯ, ಮಲ್ಲಪ್ಪ, ಗಪ್ಪು, ಕಾವೇರಿ, ರಾಜು, ಕಾಳ, ಸುಬ್ರಮಣಿ, ಪ್ರಕಾಶ್, ಸುನಿತ, ರವಿನಾ, ಗೋವಿಂದಪ್ಪ ಸೇರಿದಂತೆ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಅಧ್ಯಕ್ಷ ರಮೇಶ್ ತಂಡದಿAದ ಕಾರ್ಯಕ್ರಮದ ಅಂಗವಾಗಿ ಜೇನುಕುರುಬರ, ಯರವರ ಆದಿವಾಸಿಗಳ ವಿವಿಧ ನೃತ್ಯಗಳು, ಕೋಲಾಟಗಳು ಮೂಡಿ ಬಂದವು. ಬಸಪ್ಪ ಸ್ವಾಗತಿಸಿ, ವಂದಿಸಿದರು.

-ಹೆಚ್.ಕೆ.ಜಗದೀಶ್