ಮಡಿಕೇರಿ, ನ. ೧೫: ಮೈಸೂರು ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಕಾಂಗ್ರೆಸ್‌ನ ನಾಯಕರು ಘೋಷಿಸಿ ರುವುದನ್ನು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದು, ಮೈಸೂರಿನಲ್ಲಿ ಮಹಾರಾಜರುಗಳ ಪ್ರತಿಮೆ ಮಾತ್ರ ಸ್ಥಾಪನೆಯಾಗಬೇಕು ಹೊರತು ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಅಸಾಧ್ಯ ಎಂದು ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಕರ್ನಾಟಕದ ಕಾಮಧೇನು ಆಗಿರಲು ಅಂದು ದೂರದೃಷ್ಟಿ ಇಟ್ಟು ಬೆಂಗಳೂರು ನಿರ್ಮಿಸಿದ ಕೆಂಪೇಗೌಡ ಅವರು ಕಾರಣರಾಗಿದ್ದಾರೆ. ರಾಜ್ಯಕ್ಕೆ ಶೇ ೫೬ ಆದಾಯ ಬೆಂಗಳೂರಿನಿAದ ಬರುತ್ತಿದೆ. ೬೭ ಪೇಟೆ ನಿರ್ಮಿಸಿ ಎಲ್ಲಾ ಸಮುದಾಯಗಳಿಗೆ ಆಶ್ರಯ ನೀಡಿ, ಸಾವಿರಕ್ಕೂ ಹೆಚ್ಚು ಕೆರೆ ನಿರ್ಮಿಸಿ ಇಂದು ವಿಶ್ವ ಮಾನ್ಯತೆ ಪಡೆಯಲು ಕೆಂಪೇಗೌಡ ಅವರ ದೂರದೃಷಿಯೇ ಕಾರಣ. ಈ ಹಿನ್ನೆಲೆ ಅವರ ಪ್ರತಿಮೆಯನ್ನು ಸ್ಥಾಪಿಸಿ ಅವರ ಪರಿಚಯವನ್ನು ಜನರಿಗೆ ತಿಳಿಸುವ ಕೆಲಸವಾಗುತ್ತಿದೆ ಎಂದರು.

ಕ್ರೌರ್ಯ, ಮತಾಂದತೆಗೆ ಹೆಸರಾಗಿದ್ದ ಟಿಪ್ಪು ಪ್ರತಿಮೆ ಸ್ಥಾಪನೆ ಮಾಡಲು ಹೊರಟಿರುವುದು ಸರಿಯಲ್ಲ. ಕೊಡವರ ನರಮೇಧ, ದೇವಾಲಯಗಳ ಮೇಲೆ ದಾಳಿ, ಕನ್ನಡದ ಕಗ್ಗೊಲೆ ಮಾಡಿದ ವ್ಯಕಿಯ ಪ್ರತಿಮೆ ಮಾಡುವ ಬದಲು ಅಬ್ದುಲ್ ನಾಸೀರ್ ಸಾಬ್, ಅಬ್ದುಲ್ ಕಲಾಂ ಅವರಂತಹ ಮಹಾನ್ ವ್ಯಕ್ತಿಗಳ ಪ್ರತಿಮೆ ಮಾಡಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಟಿಪ್ಪು ಜಯಂತಿ ಮಾಡೋದು ಒಂದೆ, ಅರಣ್ಯ ಇಲಾಖೆ ವೀರಪ್ಪನ್ ಜಯಂತಿ ಮಾಡುವುದೂ ಒಂದೆ ಎಂದು ವ್ಯಂಗ್ಯವಾಡಿದ ಅವರು, ಮೈಸೂರಿಗೂ ಟಿಪ್ಪುವಿಗೂ ಸಂಬAಧವಿಲ್ಲ. ಮೈಸೂರು ಮಹಾರಾಜುರುಗಳಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣ ರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ಹೊರತುಪಡಿಸಿ ಬೇರೆ ಯಾರದ್ದೆ ಪ್ರತಿಮೆ ಮೈಸೂರಿನಲ್ಲಿ ಸ್ಥಾಪನೆ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.