ಕಳೆದ ಅನೇಕ ವರ್ಷಗಳಿಂದ ಕೊಡಗು ಜಿಲ್ಲೆಯನ್ನು ಕಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಕೊಡವ ಸಂಸ್ಕೃತಿ, ಆಚಾರ, ವಿಚಾರದ ಉಳಿವಿಗಾಗಿ ಕೆಲವು ಮಹನೀಯರು ಸೇರಿಕೊಂಡು ಕೊಡವ ಸಮಾಜಗಳ ಒಕ್ಕೂಟ ಎನ್ನುವ ಹೆಸರಿನಲ್ಲಿ ೨೦೦೧ರಲ್ಲಿ ಸಮಾಜವನ್ನು ಒಗ್ಗೂಡಿಸಿದರು.
ಜಮ್ಮಾಬಾಣೆ ಸಮಸ್ಯೆ, ಕೊಡವರ ಕೋವಿ ಹಕ್ಕು, ಸೂಕ್ಷö್ಮ ಪರಿಸರ ವಲಯದ ವಿವಾದಗಳಿಗೆಲ್ಲಾ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಒಕ್ಕೂಟ ಮಾಡಿದೆ.
ಕೊಡವ ಜನಾಂಗದ ಪದ್ಧತಿ, ಪರಂಪರೆ, ಕಲೆ, ಸಂಸ್ಕೃತಿ, ಕ್ರೀಡೆ ಮುಂತಾದವುಗಳಿಗೆ ಆದ್ಯತೆ ನೀಡಿ ಕೊಡವ ಉತ್ಸವಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಸುಸಜ್ಜಿತ ಕಲಾಮಂದಿರ, ಸಭಾಭವನ ಮತ್ತು ಊಟದ ಸಭಾಂಗಣ ನಿರ್ಮಿಸಲಾಗಿದೆ. ಕಲೆ, ಕ್ರೀಡೆ ಮತ್ತು ನೃತ್ಯ ಎಂಬ ಹೆಸರಿನ ಸಭಾಭವನದಲ್ಲಿ ಕೊಡವ ಸಂಸ್ಕೃತಿಗೆ ಪೂರಕವಾದ ಎಲ್ಲ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಬಾಳುಗೋಡು ಗ್ರಾಮದಲ್ಲಿ ೨೦೦೧ರಲ್ಲಿ ಸ್ಥಾಪನೆಗೊಂಡ ಕೊಡವ ಸಮುದಾಯದ ಕಟ್ಟಡಗಳಿಗೆ ಸರ್ಕಾರದಿಂದ ೫ ಕೋಟಿ ರೂ. ಅನುದಾನ ಲಭ್ಯವಾಗಿತ್ತು. ಉಳಿದಂತೆ ದಾನಿಗಳು ಹಾಗೂ ಸದಸ್ಯರ ಸಹಕಾರದಿಂದ ಒಟ್ಟು ೧೦ ಕೋಟಿ ರೂ. ವೆಚ್ಚದಲ್ಲಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಎರಡು ಆಟದ ಮೈದಾನಗಳನ್ನು ನಿರ್ಮಿಸಲಾಗಿದ್ದು, ಕ್ರೀಡಾಕೂಟಗಳನ್ನು ನಡೆಸಲು ಅಗತ್ಯ ಅನುಕೂಲ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾಯಿ ಕ್ರೀಡಾ ಸಂಸ್ಥೆಯ ಮಾದರಿ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಉಳಿದು ಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ೨೦೦೧ರಲ್ಲಿ ಸಂಸ್ಥೆಯ ಅಧ್ಯಕ್ಷರಾಗಿ ಮೈಸೂರು ಕೊಡವ ಸಮಾಜದ ಅಧ್ಯಕ್ಷರಾದ ಬಲ್ಲಚಂಡ ನಾಣಯ್ಯ ಅವರು ಮೂರು ವರ್ಷಗಳ ಕಾಲ ದುಡಿದು ಒಕ್ಕೂಟದ ಅಭ್ಯುದಯಕ್ಕಾಗಿ ಸಹಕರಿಸಿದ್ದಾರೆ. ನಂತರದ ಮೂರು ವರ್ಷಗಳ ಕಾಲ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಕೋಡಿರ ಅಪ್ಪಯ್ಯ ಇದರ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ೨೦೦೭ರಲ್ಲಿ ಮಲ್ಲೇಂಗಡ ದಾದ ಬೆಳ್ಳಿಯಪ್ಪ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ, ೨೦೧೧ರ ವರೆಗೆ ಒಕ್ಕೂಟದ ಬಲವನ್ನು ಹೆಚ್ಚಿಸಿದ್ದಾರೆ. ಅಲ್ಲದೆ ಕಟ್ಟಡಗಳ ಕಾಮಗಾರಿ, ಅತಿಥಿಗಳ ಕೊಠಡಿ ನಿರ್ಮಾಣ ಮುಂತಾದ ಯೋಜನೆ ರೂಪಿಸಿ ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ಯೋಧರ ಸ್ಮರಣೆಗಾಗಿ ರೂ.೨೦ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಯುದ್ಧ ಸ್ಮಾರಕವೊಂದನ್ನು ಇವರದ್ದೇ ಅವಧಿಯಲ್ಲಿ ನಿರ್ಮಿಸಲಾಗಿದೆ.
ಹುತಾತ್ಮರಾದ ಕೊಡವರು ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ಜಾತಿ, ಜನಾಂಗದ ವೀರ ಯೋಧರ ಹೆಸರನ್ನು ಈ ಸ್ಮಾರಕದಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಒಟ್ಟು ೮೫ ಯೋಧರ ಹೆಸರು ಇದ್ದು, ಪ್ರತಿವರ್ಷ ಹುತಾತ್ಮರನ್ನು ಸ್ಮರಿಸುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ೨೦೧೬ರಲ್ಲಿ ಕುಟ್ಟ ಕೊಡವ ಸಮಾಜದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಅಧಿಕಾರ ಸ್ವೀಕರಿಸಿ ಶಾಶ್ವತವಾದ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಒಕ್ಕೂಟವು ಎಲ್ಲಾ ಕೊಡವ ಸಮಾಜಗಳ ಕೇಂದ್ರವಾಗಿದ್ದು, ಕೊಡವ ಸಮಾಜದ ಸದಸ್ಯರೆಲ್ಲರು ಇದರಲ್ಲಿ ಸದಸ್ಯರಾಗಿರುತ್ತಾರೆ. ಸರ್ವ ಸದಸ್ಯರು ಒಕ್ಕೂಟ ಮತ್ತು ಸಮಾಜದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬೇಕೆಂದಿದ್ದಲ್ಲಿ ಸಮಾಜದ ಮೂಲಕ ಅಥವಾ ನೇರವಾಗಿ ಒಕ್ಕೂಟಕ್ಕೆ ತಿಳಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸಮಾಜಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಎಲ್ಲಾ ಸದಸ್ಯರಿಗೆ ಒಕ್ಕೂಟದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿ ಹೇಳಿ ಒಕ್ಕೂಟದ ಮಾಸಿಕ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡು ವಿಚಾರ ವಿನಿಮಯ ನಡೆಸಿ ಜನಾಂಗದ ಮೂಲಭೂತ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಲಾಗುತ್ತದೆ. ಮಹಿಳಾ (ಪೊಮ್ಮಕ್ಕ) ವಿಭಾಗವೂ ಪ್ರತ್ಯೇಕವಾಗಿದ್ದು, ಇದರ ಸದಸ್ಯರು ಎಲ್ಲಾ ಆಗು ಹೋಗುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಒಕ್ಕೂಟದ ರಚನೆಯಲ್ಲಿ ಕೊಡವ ಸಮಾಜಗಳ ಪಾತ್ರವೇ ಪ್ರಮುಖವಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ ಇವರೆಲ್ಲರ ಆಯ್ಕೆ ಕೊಡವ ಸಮಾಜಗಳ ಮೂಲಕವೇ ಆಗುತ್ತದೆ. ಕೊಡವ ಸಮಾಜ, ಸಮಾಜದ ಸದಸ್ಯರುಗಳ ಹಿತಕಾಯುವುದೇ ಅಲ್ಲದೆ ಸಮಸ್ಯೆಗಳ ನಿವಾರಣೆ ಒಕ್ಕೂಟದ ಮುಖ್ಯ ಉದ್ದೇಶವಾಗಿದೆ.
ಕೊಡವ ನಮ್ಮೆ
ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ತಾ. ೧೭ ರಿಂದ ೨೦ರವರೆಗೆ ಅಂತರ ಕೊಡವ ಸಮಾಜಗಳ ನಡುವಿನ ಕೊಡವ ನಮ್ಮೆ ಕಾರ್ಯಕ್ರಮ ನಡೆಯಲಿದೆ.
ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಅಧೀನದಲ್ಲಿ ಈಗಾಗಲೇ ೩೪ ಕೊಡವ ಸಮಾಜಗಳು ಸದಸ್ಯತ್ವವನ್ನು ಪಡೆದಿದ್ದು, ಈ ಕೊಡವ ಸಮಾಜಗಳ ನಡುವೆ ಮೂರು ದಿನಗಳ ಕಾಲ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಕೊಡವ ನಮ್ಮೆ ಕಾರ್ಯಕ್ರಮ ತಾ. ೧೭ ರಂದು ಉದ್ಘಾಟನೆಗೊಳ್ಳಲಿದ್ದು, ತಾ. ೧೮ ರಂದು ಬೆಳಿಗ್ಗೆ ಸ್ಥಳೀಯ ಆವರಣದಲ್ಲಿರುವ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುವುದು. ನಂತರ ೯ ಗಂಟೆಗೆ ಅಂತರ ಕೊಡವ ಸಮಾಜಗಳ ನಡುವೆ ನಾಕೌಟ್ ಮಾದರಿಯ ಹಾಕಿ ಪಂದ್ಯಾವಳಿ ನಡೆಯಲಿದೆ.
ಅಂದು ಪೊಮ್ಮಕ್ಕಡ ಪರಿಷತ್ನಿಂದ ವಸ್ತುಪ್ರದರ್ಶನ ಕಾರ್ಯಕ್ರಮ ಕೂಡ ಜರುಗಲಿದೆ. ತಾ. ೧೯ ರಂದು ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿರುವ ಆಕರ್ಷಣೀಯವಾದ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಮಲ್ಚಿರ ಎ.ಅಯ್ಯಪ್ಪ, ಕೊಡಗಿನ ನಿವೃತ್ತ ಸೇನಾಧಿಕಾರಿಗಳು, ನಿವೃತ್ತ ಯೋಧರು ಹಾಗೂ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಹಾಕಿ ಪಂದ್ಯಾವಳಿ ಸೆಮಿಫೈನಲ್ ನಡೆಯಲಿದೆ.
ತಾ. ೨೦ ರಂದು ಬೆಳಗ್ಗೆ ೯.೩೦ ಗಂಟೆಗೆ ಕೊಡವ ಸಮಾಜಗಳ ನಡುವೆ ರಾಜ್ಯಮಟ್ಟದ ಅಂತರ ಕೊಡವ ಸಮಾಜ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ.
ಉಮ್ಮತ್ತಾಟ್, ಕೋಲಾಟ್, ಬೊಳೋಪಾಟ್, ಕತ್ತಿಯಾಟ್, ಪರಿಯಕಳಿ, ಸಮ್ಮಂದ ಅಡುಕುವೊ, ತಾಲಿಪಾಟ್, ಕಪ್ಪೆಯಾಟ್ ಸೇರಿದಂತೆ ವಿವಿಧ ಜನಪದೀಯ ಕಲೆಗಳು ಆಕರ್ಷಿಸಲಿವೆ.
ಮಧ್ಯಾಹ್ನ ಹಾಕಿ ಪಂದ್ಯಾವಳಿಯ ಫೈನಲ್, ಮಹಿಳೆಯರ ಹಗ್ಗಜಗ್ಗಾಟ ಹಾಗೂ ಭಾರದ ಗುಂಡು ಎಸೆತ ಸ್ಪರ್ಧೆಗಳು ನಡೆಯಲಿವೆ.
ಹಾಕಿ ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ.೩೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.೨೦,೦೦೦ ನಗದು ಹಾಗೂ ಟ್ರೋಫಿ ಮತ್ತು ಸೆಮಿ ಫೈನಲ್ನಲ್ಲಿ ಭಾಗವಹಿಸಿ ಸೋತ ತಂಡಕ್ಕೆ ೧೦,೦೦೦ ರೂ. ನಗದು ಹಾಗೂ ಟ್ರೋಫಿ ನೀಡಲಾಗುವುದು.
ಸಮಾರೋಪ ಸಮಾರಂಭದಲ್ಲಿ ಸಚಿವರುಗಳು, ಶಾಸಕರುಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕೋವಿಡ್ ಪರಿಸ್ಥಿತಿಯ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಕೊಡವ ನಮ್ಮೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿತ್ತು. ಇದೀಗ ದಾನಿಗಳ ಸಹಕಾರದಿಂದ ೮ನೇ ಕೊಡವ ನಮ್ಮೆಯನ್ನು ನಡೆಸಲಾಗುತ್ತಿದೆ. ಎಲ್ಲಾ ಕೊಡವ ಸಮಾಜಗಳು, ಕೊಡವ ಸಂಘ, ಸಂಸ್ಥೆಗಳು ಹಾಗೂ ಕೊಡವಾಭಿಮಾನಿಗಳು ೩ ದಿನಗಳ ಕಾಲ ನಡೆಯುವ ಈ ಕೊಡವ ನಮ್ಮೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ಕೋರಿಕೊಂಡಿದೆ.
-ಬೊಳ್ಳಜಿರ ಬಿ.ಅಯ್ಯಪ್ಪ, ಮಡಿಕೇರಿ
ಮೊ : ೯೮೮೦೭೭೮೦೪೭