ಗೋಣಿಕೊಪ್ಪ ವರದಿ, ನ. ೧೫: ಮುಳಿಯ ಪ್ರತಿಷ್ಠಾನ ಮತ್ತು ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಳಿಯ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಕನ್ನಡ ಚಿತ್ತಾರ’ ಚಿತ್ರಕಲೆ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಕನ್ನಡ ಚಿತ್ರ ಬಿಡಿಸಿದರು.

ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಮಕ್ಕಳಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೩ ರಿಂದ ೫ ಮತ್ತು ೬ ನೇ ತರಗತಿಯಿಂದ ೮ ನೇ ತರಗತಿವರೆಗಿನ ಒಂದು ನೂರಕ್ಕೂ ಅಧಿಕ ಮಕ್ಕಳು ಪಾಲ್ಗೊಂಡು ಗಮನ ಸೆಳೆದರು. ಸ್ಪರ್ಧಿಗಳು ದೀಪ ಹಚ್ಚುವ ಮೂಲಕ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ನಾಡು, ನುಡಿ, ಭಾವ-ಬದುಕು ಬಿಂಬಿಸುವ ಚಿಂತನೆಗಳು ಕಲೆಯಾಗಿ ಮೂಡಿ ಬಂದವು. ಕನ್ನಡ ಬಾವುಟ, ಭಾಷಾ ಕವಿ, ಕರ್ನಾಟಕದ ಐತಿಹಾಸಿಕ ಹಿನ್ನೆಲೆಯ ಚಿತ್ರಣ ಹೀಗೆ ನಾನಾ ಚಿತ್ರಗಳಿಗೆ ಬಣ್ಣ ಹಚ್ಚಿದರು. ಮುಳಿಯ ಪ್ರತಿಷ್ಠಾನದ ಶಾಖಾ ಪ್ರಬಂಧಕ ಕಿಶೋರ್ ಸಾಲಿಯಾನ್ ಮಾತನಾಡಿ, ಸಂಸ್ಥೆ ವತಿಯಿಂದ ಸಾರ್ವಜನಿಕರು ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಕಾರ್ಯಕ್ರಮ ಸಹಕಾರಿ ಎಂದರು.

ಪೊನ್ನAಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಮಕ್ಕಳಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯ, ಐತಿಹಾಸಿಕ ಹಿನ್ನೆಲೆಗಳನ್ನು ಚಿತ್ರಗಳ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ. ಪಾಲಕರ ಪ್ರೋತ್ಸಾಹದಿಂದ ಮಕ್ಕಳ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದರು. ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ.ವಿ. ಅರುಣ್‌ಕುಮಾರ್, ನಿರ್ದೇಶಕ ಸಿಂಗಿ ಸತೀಶ್, ಸದಸ್ಯ ಡಿ. ನಾಗೇಶ್ ಉಪಸ್ಥಿತರಿದ್ದರು.