ಗೋಣಿಕೊಪ್ಪಲು, ನ.೧೫: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು, ಕಳತ್ಮಾಡು ಗ್ರಾಮಗಳಲ್ಲಿ ಸುಮಾರು ೮ ಕಾಡಾನೆಗಳ ಗುಂಪು ಭತ್ತದ ಗದ್ದೆಗೆ ನಿರಂತರ ದಾಳಿಯಿಟ್ಟು ಕೃಷಿ ಫಸಲು ನಾಶ ಮಾಡುತ್ತಿರುವುದಾಗಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹೊಸೂರು ಗ್ರಾಮದ ಬಹುತೇಕ ಸಣ್ಣ ಹಿಡುವಳಿದಾರರು ಕಾಡಾನೆ ಉಪಟಳಕ್ಕೆ ಹೆದರಿ ಭತ್ತದ ಕೃಷಿ ಮಾಡುವದನ್ನೇ ನಿಲ್ಲಿಸಿದ್ದಾರೆ. ಹೀಗಿದ್ದೂ ಕೆಲವು ಕೃಷಿಕರು ಈ ಬಾರಿ ಸುಮಾರು ೫೦ ಎಕರೆ ಗದ್ದೆಯಲ್ಲಿ ಭತ್ತ ಕೃಷಿ ಮಾಡಿದ್ದರು. ಅತ್ತೂರು ಗ್ರಾಮದ ಜೆಪ್ಪೆಕೋಡಿ ರಾಜ ಅವರು ಕಳೆದ ಹಲವು ವರ್ಷಗಳಿಂದ ಸುಮಾರು ೩ ಎಕರೆ ಜಾಗದಲ್ಲಿ ಅತಿರಾ ತಳಿ ಭತ್ತವನ್ನು ಬೆಳೆಯುತ್ತಿದ್ದು ವಾರ್ಷಿಕವಾಗಿ ೪೫ ಕ್ವಿಂಟಾಲ್ ಭತ್ತದ ಉತ್ಪಾದನೆ ಮಾಡುತ್ತಿದ್ದರು. ಆದರೆ ಇದೀಗ ೮ ಕಾಡಾನೆಗಳ ಹಿಂಡು ರಾಜಾ ಅವರ ಭತ್ತದ ಮಡಿಗಳಿಗೆ ನಿರಂತರ ನುಸುಳುತ್ತಿದ್ದು, ಕಂಗಾಲಾಗುವAತೆ ಮಾಡಿದೆ.
ಮಾಧ್ಯಮದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡ ರಾಜ ಅವರು, ಸುಮಾರು ರೂ.೧ ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಅಡಿಕೆ, ತೆಂಗು ಕೃಷಿಗೂ ಕಾಡಾನೆ ಹಾನಿ ಮಾಡುತ್ತಿದ್ದು, ಆಹಾರಕ್ಕಾಗಿ ಭತ್ತ ಬೆಳೆಯುವದೂ ಕಷ್ಟ ಸಾಧ್ಯವಾಗಿದೆ ಎಂದರು. ಅರಣ್ಯ ಇಲಾಖೆ ನಿರಂತರ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡುತ್ತಿದ್ದರೂ ಮತ್ತೆ ಮತ್ತೆ ಕಾಡಾನೆಗಳು ನುಸುಳುತ್ತಿವೆ. ಸಮೀಪದ ಕಾಡಿನಲ್ಲಿಯೇ ಹಗಲು ಹೊತ್ತು ವಾಸ್ತವ್ಯ ಹೂಡುತ್ತಿದ್ದು ಪುಂಡಾನೆಗಳನ್ನು ಸೆರೆಹಿಡಿದು ಸಾಕಾನೆ ಶಿಬಿರಗಳಿಗೆ ಸಾಗಿಸಿದ್ದಲ್ಲಿ ಮಾತ್ರ ಶಾಶ್ವತ ಪರಿಹಾರ ದೊರೆಯಲು ಸಾಧ್ಯ. ಅರಣ್ಯ ಇಲಾಖೆ ಭತ್ತದ ಫಸಲು ನಷ್ಟಕ್ಕೆ ನೀಡುವ ಪರಿಹಾರ ಏನೇನೂ ಸಾಲದು. ಭತ್ತದ ಬಿತ್ತನೆ ಖರೀದಿ, ಕಾರ್ಮಿಕರ ವೇತನ, ಗೊಬ್ಬರ ಇತ್ಯಾದಿ ವೆಚ್ಚ, ಕೊಯ್ಲು ಖರ್ಚು ಲೆಕ್ಕ ಹಾಕಿದರೆ ಸಣ್ಣ ಪ್ರಮಾಣದ ಲಾಭ ಸಿಗುತ್ತಿತ್ತು. ಈಗ ಅದಕ್ಕೂ ಸಂಚಕಾರ ಬಂದಿದೆ.
ವೀರಾಜಪೇಟೆ ಅರಣ್ಯ ವಲಯಕ್ಕೆ ಅತ್ತೂರು, ಹೊಸೂರು, ಕಳತ್ಮಾಡು ಗ್ರಾಮಗಳು ಒಳಪಡುತ್ತಿದ್ದು, ಇದೀಗ ಅಧಿಕಾರಿಗಳು ಭೇಟಿ ನೀಡಿದ್ದರೂ ನಷ್ಟ ಪರಿಹಾರ ‘ಹಸಿದ ಹೊಟ್ಟೆಗೆ ಅರೆಕಾಸು ಮಜ್ಜಿಗೆ’ ಎಂಬAತಾಗಿದೆ ಎಂದು ನೋವು ವ್ಯಕ್ತಪಡಿಸಿದರು. ಹೊಸೂರು ಗ್ರಾಮದ ಮಾಜಿ ಗ್ರಾ.ಪಂ.ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಅವರು ಮಾತನಾಡಿ, ಸುಮಾರು ೧೬ ಪುಂಡಾನೆಗಳನ್ನು ಈ ಭಾಗದಲ್ಲಿ ಹಿಡಿಯುವಂತೆ ಗ್ರಾಮಸ್ಥರು ಹೋರಾಟ ನಡೆಸಿದ್ದರೂ ‘ಬೆಟ್ಟ ಅಗೆದು ಇಲಿ ಹಿಡಿದಂತೆ’ ಕೇವಲ ೨ ಪುಂಡಾನೆಗಳನ್ನು ಮಾತ್ರ ಹಿಂದೆ ಸೆರೆ ಹಿಡಿಯಲಾಗಿತ್ತು. ಇದೀಗ ಮತ್ತೆ ಕಾಡಾನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಅರಣ್ಯ ಇಲಾಖೆಗೆ ದೂರು ನೀಡುವ ಆಸಕ್ತಿಯೂ ಕಳೆದು ಹೋಗಿದೆ.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೊಲ್ಲೀರ ಧರ್ಮಜ ಅವರು ಮಾತನಾಡಿ ಈ ಹಿಂದೆ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಅವರಿದ್ದಾಗ ಕಾಡಾನೆಯನ್ನು ಮರಳಿ ಕಾಡಿಗೆ ಓಡಿಸುವ ಪ್ರಕ್ರಿಯೆ ಉತ್ತಮವಾಗಿ ನಡೆದಿತ್ತು. ಆದರೆ, ಕಾರ್ಯಾಚರಣೆ ಸಂದರ್ಭ ಮಾಲತಿ ಪ್ರಿಯ ಅವರು ಒಂಟಿ ಸಲಗದ ದಾಳಿಗೆ ಸಿಲುಕುವ ಪರಿಸ್ಥಿತಿ ಇದ್ದಾಗ ಗ್ರಾಮಸ್ಥರೇ ಅವರ ಜೀವ ರಕ್ಷಣೆ ಮಾಡಬೇಕಾಯಿತು. ಇದೀಗ ಹೊಸೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ನಮಗೆ ಯಾವದೇ ರಕ್ಷಣೆ ಇಲ್ಲವಾಗಿದೆ. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕಾದ ಅತಂತ್ರ ಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದುವರಿದ ಅವರು ಇದೀಗ ನಾಗರಹೊಳೆ ರಾಷ್ಟಿçÃಯ ಉದ್ಯಾನ ವ್ಯಾಪ್ತಿಯಲ್ಲಿ ಆನೆ ಸಫಾರಿ ಇತ್ಯಾದಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಇಲಾಖೆ ಆರಂಭಿಸಿ ಇಲ್ಲಿನ ಆನೆಗಳನ್ನು ಹಿಡಿದು ಪಳಗಿಸಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. -ಟಿ.ಎಲ್. ಶ್ರೀನಿವಾಸ್