ಶನಿವಾರಸAತೆ, ನ. ೧೫: ಪಟ್ಟಣದ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಸಂತೆ ಮಾರುಕಟ್ಟೆಯನ್ನು ಆಯೋಜಿಸ ಲಾಗಿತ್ತು. ಸಂತೆ ಮಾರುಕಟ್ಟೆಯಲ್ಲಿ ಪ್ರಾಥಮಿಕ ಶಾಲೆಯ ೫ ರಿಂದ ೭ನೇ ತರಗತಿಯ ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ಬೆಳೆದ ವಿವಿಧ ಬಗೆಯ ಹಣ್ಣುಹಂಪಲು, ತರಕಾರಿ, ಸೊಪ್ಪು, ಗೆಡ್ಡೆಗೆಣಸು, ತಯಾರಿಸಿದ ತಿಂಡಿ ತಿನಿಸುಗಳನ್ನು ಅಂಗಡಿ ಇಟ್ಟು ಕಡಿಮೆ ಬೆಲೆಗೆ ವ್ಯಾಪಾರ ಮಾಡಿದರು. ಪೋಷಕರು ಹಾಗೂ ಸಾರ್ವಜನಿಕರು ಗ್ರಾಹಕರಾಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ೧೨ ಗಂಟೆಗೆಲ್ಲಾ ಮಕ್ಕಳ ಬಿರುಸಿನ ವ್ಯಾಪಾರ ಮುಗಿದಿದ್ದು, ಸಂಪಾದಿಸಿದ ಹಣ ನೋಡಿ ಖುಷಿಪಟ್ಟರು.

ಸಂಸ್ಥೆಯ ಪ್ರಾಂಶುಪಾಲೆ ಡಿ. ಸುಜಲಾದೇವಿ ಮಾತನಾಡಿ, ಚಿಕ್ಕ ಮಕ್ಕಳಾಗಿರುವಾಗಲೇ ವಿದ್ಯಾರ್ಥಿಗಳಲ್ಲಿ ವ್ಯಾಪಾರ ವಹಿವಾಟು, ವ್ಯವಹಾರ ಜ್ಞಾನದ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷವೂ ಶಾಲೆಯಲ್ಲಿ ಮಕ್ಕಳ ಸಂತೆ ಮಾರುಕಟ್ಟೆಯನ್ನು ಆಯೋಜಿಸಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.